Advertisement
ರಾಜಸ್ಥಾನ್ ಮತ್ತು ಆರ್‌ಸಿಬಿ ಸತತ 3 ಸೋಲುಂಡು ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿದ್ದವು. ಇವುಗಳಲ್ಲೀಗ ಅಜಿಂಕ್ಯ ರಹಾನೆ ಬಳಗಕ್ಕೆ ಸೋಲಿನಿಂದ ಮುಕ್ತಿ ಸಿಕ್ಕಿದೆ. ಕೊಹ್ಲಿ ಪಡೆ ಮಾತ್ರ ಸೋಲಿನ ಕಂದಕದಿಂದ ಮೇಲೇಳುವ ಸೂಚನೆ ನೀಡಿಲ್ಲ.
Related Articles
Advertisement
ಗೋಪಾಲ್‌ಗೆ ಶ್ರೇಯಸ್ಸುಈ ಗೆಲುವಿನ ಶ್ರೇಯಸ್ಸು ಸ್ಪಿನ್ನರ್ ಶ್ರೇಯಸ್ ಗೋಪಾಲ್‌ಗೆ
ಸಲ್ಲಬೇಕು ಎಂದವರು ರಾಜಸ್ಥಾನ್ ನಾಯಕ ಅಜಿಂಕ್ಯ ರಹಾನೆ. “ಕೊಹ್ಲಿ ಮತ್ತು ಎಬಿಡಿ ವಿರುದ್ಧ ಉತ್ತಮ ದಾಖಲೆ ಹೊಂದಿದ್ದ ಗೋಪಾಲ್ ಇಲ್ಲಿಯೂ ಯಶಸ್ಸು ಸಂಪಾದಿಸಿದರು. 3-4 ಓವರ್‌ಗಳಲ್ಲೇ ಇದು ನಿಧಾನ ಗತಿಯ ಟ್ರ್ಯಾಕ್ ಎಂಬುದು ತಿಳಿಯಿತು. ಹೀಗಾಗಿ ಸ್ಪಿನ್ನರ್‌ಗಳನ್ನು ಕೂಡಲೇ ದಾಳಿಗಿಳಿಸಿದೆವು. ಪವರ್ ಪ್ಲೇ ಅವಧಿಯಲ್ಲಿ ಗೌತಮ್ ಅಮೋಘ ನಿಯಂತ್ರಣ ಸಾಧಿಸಿದರು. ಗೋಪಾಲ್ ದೊಡ್ಡ ಬೇಟೆಯಾಡತೊಡಗಿದರು. ಅಂಕದ ಖಾತೆ ತೆರೆದುದರಿಂದ ದೊಡ್ಡದೊಂದು ರಿಲೀಫ್ ಸಿಕ್ಕಿದೆ. ಹಿಂದಿನ ಮೂರೂ ಪಂದ್ಯಗಳಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲೇ ಇತ್ತು. ಇಂದು ಶೇ. ನೂರಕ್ಕೂ ಹೆಚ್ಚಿನ ಪರಿಶ್ರಮ ಹಾಕಿದೆವು…’ ಎಂದು ರಹಾನೆ ಹೇಳಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 158 ರನ್ ಗಳಿಸಿದರೆ, ರಾಜಸ್ಥಾನ್ 19.5 ಓವರ್‌ಗಳಲ್ಲಿ 3 ವಿಕೆಟಿಗೆ 164 ರನ್ ಬಾರಿಸಿ ಗೆಲುವಿನ ಖಾತೆ ತೆರೆಯಿತು. ನಾಯಕ ಅಜಿಂಕ್ಯ ರಹಾನೆ 22, ಜಾಸ್ ಬಟ್ಲರ್ 59, ಸ್ಟೀವನ್ ಸ್ಮಿತ್ 38, ರಾಹುಲ್ ತ್ರಿಪಾಠಿ ಔಟಾಗದೆ 34 ರನ್ ಮಾಡಿ ತಂಡಕ್ಕೆ ಮೊದಲ ಜಯ ತಂದಿತ್ತರು. ಆರ್‌ಸಿಬಿ ಸರದಿಯಲ್ಲಿ ಮಿಂಚಿದ್ದು ಪಾರ್ಥಿವ್ ಪಟೇಲ್ ಮಾತ್ರ. ಎಕ್ಸ್‌ಟ್ರಾ ಇನ್ನಿಂಗ್ಸ್
ಆರ್‌ಸಿಬಿ ಪ್ರಸಕ್ತ ಐಪಿಎಲ್ ಋತುವಿನ ಎಲ್ಲ 4 ಪಂದ್ಯಗಳನ್ನು ಸೋತಿತು. ಇದರೊಂದಿಗೆ ಕಳೆದ ಋತುವಿನ ಪಂದ್ಯವೂ ಸೇರಿದಂತೆ ಆರ್‌ಸಿಬಿ ಸತತ 5 ಪಂದ್ಯಗಳನ್ನು ಸೋತಂತಾಯಿತು. ಇದು ಆರ್‌ಸಿಬಿಯ 2ನೇ ಅತೀ ದೊಡ್ಡ ಸೋಲಿನ ಸರಮಾಲೆ. 2008ರ ಆರಂಭದ ಋತುವಿನಲ್ಲೂ ಆರ್‌ಸಿಬಿ ಸತತ 5 ಪಂದ್ಯಗಳಲ್ಲಿ ಎಡವಿತ್ತು. 2017ರಲ್ಲಿ ಸತತ 6 ಪಂದ್ಯಗಳನ್ನು ಸೋತದ್ದು ದಾಖಲೆ. ಶ್ರೇಯಸ್ ಗೋಪಾಲ್ ಐಪಿಎಲ್‌ನಲ್ಲಿ 2ನೇ ಸಲ ಒಂದೇ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ವಿಕೆಟ್‌ಗಳನ್ನು ಉರುಳಿಸಿದರು. ಕಳೆದ ವರ್ಷದ ಬೆಂಗಳೂರು ಪಂದ್ಯದಲ್ಲೂ ಅವರು ಈ ಸಾಧನೆ ಮಾಡಿದ್ದರು. ಶ್ರೇಯಸ್ ಗೋಪಾಲ್ 2 ಸಲ ಒಂದೇ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ಅವರನ್ನು ಔಟ್ ಮಾಡಿದ 2ನೇ ಬೌಲರ್. ಆಶಿಷ್ ನೆಹ್ರಾ ಮೊದಲಿಗ. ಈ ವರೆಗೆ ಒಟ್ಟು 17 ಮಂದಿ ಕೊಹ್ಲಿ ಮತ್ತು ಎಬಿಡಿ ಅವರನ್ನು ಒಂದೇ ಪಂದ್ಯದಲ್ಲಿ ಔಟ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಎಬಿಡಿ-ಶ್ರೇಯಸ್ ಗೋಪಾಲ್ ಈ ವರೆಗೆ 3 ಸಲ ಮುಖಾಮುಖಿಯಾಗಿದ್ದು, ಎಲ್ಲ 3 ಸಂದರ್ಭಗಳಲ್ಲೂ ಗೋಪಾಲ್ ಅವರೇ ಈ ಹೊಡಿಬಡಿ ಆಟಗಾರನ ವಿಕೆಟ್ ಉರುಳಿಸಿದ್ದಾರೆ. ಎಬಿಡಿಗೆ ಗೋಪಾಲ್ ಒಟ್ಟು 27 ಎಸೆತವಿಕ್ಕಿದ್ದು, 21 ರನ್ ನೀಡಿದ್ದಾರೆ. ಆರ್‌ಸಿಬಿ ವಿರುದ್ಧ 3 ಪಂದ್ಯಗಳನ್ನಾಡಿರುವ ಗೋಪಾಲ್ 50 ರನ್ ನೀಡಿ 9 ವಿಕೆಟ್ ಹಾರಿಸಿದರು. ವಿರಾಟ್ ಕೊಹ್ಲಿ ನಾಯಕನಾಗಿ 100 ಐಪಿಎಲ್ ಪಂದ್ಯಗಳನ್ನು ಪೂರ್ತಿಗೊಳಿಸಿದರು. ಈ ನೂರೂ ಪಂದ್ಯಗಳಲ್ಲಿ ಅವರು ಆರ್‌ಸಿಬಿ ತಂಡದ ನಾಯಕನಾಗಿದ್ದರು. ಕೊಹ್ಲಿ 100 ಐಪಿಎಲ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ 3ನೇ ಕ್ರಿಕೆಟಿಗ. ಧೋನಿ (162) ಮತ್ತು ಗಂಭೀರ್ (129) ಉಳಿದಿಬ್ಬರು. ಪಾರ್ಥಿವ್ ಪಟೇಲ್ ಟಿ20 ಪಂದ್ಯಗಳಲ್ಲಿ 4 ಸಾವಿರ ರನ್ ಪೂರ್ತಿಗೊಳಿಸಿದರು (4,010 ರನ್). ಅವರು ಈ ಸಾಧನೆ ಮಾಡಿದ ವಿಶ್ವದ 87ನೇ, ಭಾರತದ 16ನೇ ಆಟಗಾರ. ಪಾರ್ಥಿವ್ ಪಟೇಲ್ ಐಪಿಎಲ್‌ನಲ್ಲಿ 12ನೇ ಅರ್ಧ ಶತಕ ಹೊಡೆದರು. ಒಟ್ಟಾರೆಯಾಗಿ ಇದು ಅವರ 22ನೇ ಟಿ20 ಅರ್ಧ ಶತಕ. ಜಾಸ್ ಬಟ್ಲರ್ ತವರಿನ ಜೈಪುರ ಐಪಿಎಲ್ ಪಂದ್ಯಗಳಲ್ಲಿ ಸತತ 4ನೇ ಅರ್ಧ ಶತಕ ಹೊಡೆದರು. ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ-4 ವಿಕೆಟಿಗೆ 158. ರಾಜಸ್ಥಾನ್-19.5 ಓವರ್‌ಗಳಲ್ಲಿ 3 ವಿಕೆಟಿಗೆ 164 (ಬಟ್ಲರ್ 59, ಸ್ಮಿತ್ 38, ತ್ರಿಪಾಠಿ ಔಟಾಗದೆ 34, ರಹಾನೆ 22, ಚಾಹಲ್ 17ಕ್ಕೆ 2, ಸಿರಾಜ್ 25ಕ್ಕೆ 1). ಪಂದ್ಯಶ್ರೇಷ್ಠ: ಶ್ರೇಯಸ್ ಗೋಪಾಲ್.