ಬೆಂಗಳೂರು: ದೇಶದಲ್ಲಿ ಐಪಿಎಲ್ ಜ್ವರ ನಿಧಾನವಾಗಿ ಕಾವೇರುತ್ತಿದೆ. ಸ್ಟಾರ್ ಆಟಗಾರರು ತಂಡ ಕೂಡಿಕೊಳ್ಳುತ್ತಿದ್ದಾರೆ. ಕೂಟ ಆರಂಭಕ್ಕೆ ಇನ್ನು ಕೆಲವೇ ದಿನಗಳಿರುವುದರಿಂದ ತಂಡಗಳಿಂದ ಹೊಸ ಹೊಸ ಸುದ್ದಿ ಹೊರಬರುತ್ತಿದೆ. ಇವೆಲ್ಲದರ ಮಧ್ಯೆ ಆರ್ ಸಿಬಿ ಆಟಗಾರ ಎ.ಬಿ.ಡಿವಿಲಿಯರ್ಸ್ ತನ್ನ ಸಾರ್ವಕಾಲಿಕ ಐಪಿಎಲ್ ತಂಡವನ್ನು ಹೆಸರಿಸಿದ್ದಾರೆ.
ಕ್ರಿಕ್ ಬಜ್ ಸಂದರ್ಶನದಲ್ಲಿ ಎಬಿಡಿ ತನ್ನ ತಂಡವನ್ನು ಪ್ರಕಟಿಸಿದ್ದಾರೆ. ವಿಶೇಷವೆಂದರೆ ಸುರೇಶ್ ರೈನಾ, ಆಂದ್ರೆ ರಸೆಲ್, ಲಸಿತ್ ಮಾಲಿಂಗರಂತಹ ಆಟಗಾರರಿಗೆ ಎಬಿಡಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಎಬಿಡಿ ತಂಡದಲ್ಲಿ ನಾಲ್ವರು ವಿದೇಶಿ ಆಟಗಾರರಿದ್ದಾರೆ. ಆರಂಭಿಕರಾಗಿ ವಿರೇಂದ್ರ ಸೆಹವಾಗ್ ಮತ್ತು ಮುಂಬೈ ನಾಯಕ ರೋಹಿತ್ ಶರ್ಮಾ ಅವರನ್ನು ಹೆಸರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಮೂರು ಆಯ್ಕೆ ನೀಡಿದ್ದಾರೆ. ವಿಲಿಯಮ್ಸನ್ ಅಥವಾ ಸ್ಮಿತ್ ಅಥವಾ ಸ್ವತಃ ತಾನು ಆಡುವುದಾಗಿ ಎಬಿಡಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಅದು ಕೋಟ್ಯಂತರ ಕನಸುಗಳು ನನಸಾದ ದಿನ.. ವಿಶ್ವಕಪ್ ಗೆದ್ದ ಸಂಭ್ರಮಕ್ಕೆ ಹತ್ತರ ಸಂಭ್ರಮ
ಐದನೇ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್, ಆರನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಹೆಸರಿಸಿದ್ದಾರೆ. ಧೋನಿ ಅವರಿಗೆ ನಾಯಕತ್ವ ನೀಡಿದ್ದಾರೆ. ಏಳನೇ ಕ್ರಮಾಂಕದಲ್ಲಿ ಜಡೇಜಾ, ನಂತರ ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕಗಿಸೋ ರಬಾಡ ಮತ್ತು ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.