Advertisement

ಅಲೆಮಾರಿ ಜನಾಂಗದ ಬದುಕಿನ ಯಾತನೆ

08:36 PM Feb 28, 2021 | Team Udayavani |

ಕರ್ನಾಟಕದ ಅಲೆಮಾರಿ ಜನಾಂಗದ ಯಾತನೆಯ ಬಗ್ಗೆ ಹೇಳಲು ಪ್ರಯತ್ನಿಸುತ್ತೇನೆ. ಒಂದಾನೊಂದು ಕಾಲದಲ್ಲಿ ನಮ್ಮ ಕುಟುಂಬ ಸದಸ್ಯರೂ ಈ ಅಲೆಮಾರಿ ಎನ್ನುವ ಸಮಸ್ಯೆಯನ್ನು ಅನುಭವಿಸಿ ಬಂದವರೇ.

Advertisement

ತಮ್ಮ ಊರಲ್ಲಿ ಆದಾಯವಿಲ್ಲದೆ, ಬದುಕಲು ಸೂರು ಇಲ್ಲದೆ, ಕುಟುಂಬದವರನ್ನು ಸಾಕಲು ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ತಮ್ಮವರ ಸಮೇತ ಹೋಗುವ ಜನರೇ ಅಲೆಮಾರಿಗಳು ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಆದರೆ ಅವರ ಬದುಕಿನ ಯಾತನೆ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳಲು ಮಾತ್ರ ಯಾರಿಂದಲೂ ಸಾಧ್ಯವಿಲ್ಲ.

ಅಲೆಮಾರಿ ಜನಾಂಗದವರಿಗೆ ಭಾರತೀಯನೆಂದು ಹೇಳಲು ಇರುವ ಒಂದೇ ಒಂದು ಆಧಾರ ಮತ ಹಾಕುವ ಗುರುತಿನ ಚೀಟಿ. ರಾಜಕೀಯ ನಾಯಕರು ಆಡಳಿತಕ್ಕೆ ಏರಲು ಬೇಕಾಗುವ ಮತ ಎನ್ನುವ ಒಂದು ಬೆರಳು ಸಾಕು. ಅದು ಅಲೆಮಾರಿಗಳಿಗೆ ಇದೆ. ಐದು ವರ್ಷಕ್ಕೊಮ್ಮೆ ರಾಜಕೀಯ ನಾಯಕರೇ ಹಣ ಕೊಟ್ಟು ಕರೆದುಕೊಂಡು ಬಂದು ಮತ ಹಾಕಿಸುವ ಪದ್ಧತಿ ಕೂಡ ಇದೆ. ಮತ ಹಾಕುವುದು ಎಲ್ಲರ ಹಕ್ಕು ನಿಜ. ಆದರೆ ಮತ ಹಾಕಲು ಹಣ ಕೊಡುವ ಜನಪ್ರತಿನಿಧಿಗಳು ಅವರ ಬದುಕಿನ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ?ಕೆಲವರಿಗೆ ಪಡಿತರ ಚೀಟಿ ಕೂಡ ಇಲ್ಲ. ಅವರಿಗೆ ನಿರ್ದಿಷ್ಟವಾದ ವಿಳಾಸ ಕೂಡ ಇಲ್ಲ, ಇದು ಯಾರ ತಪ್ಪು?

ಶ್ರೀಮಂತಿಕೆಯ ಬದುಕಿನಲ್ಲಿ ಮುಳುಗಿ ಹೋಗಿರುವ ರಾಜಕೀಯ ನಾಯಕರಿಗೆ ಅಲೆಮಾರಿಗಳ ಸಂಕಷ್ಟ ಅರ್ಥವಾಗುವುದಾದರೂ ಹೇಗೆ? ಇನ್ನು ಅಧಿಕಾರಿಗಳು ರಾಜಕೀಯ ನಾಯಕರ ಕೆಳಗೆ ಕುಳಿತು ಬಿಟ್ಟಿರುವವರು. ಅವರಲ್ಲಿ ಬಹುತೇಕರು ಯಾವ ರೀತಿಯಲ್ಲೂ ಸಹಾಯ ಮಾಡದೇ ಕಚೇರಿಗೆ ಮಾತ್ರ ಸೀಮಿತರು.

ಅಲೆಮಾರಿಗಳು ನಿರ್ಮಿಸಿಕೊಂಡಿರುವ ಸೂರು ಹುಲ್ಲು ಹಾಸಿನ ಛಾವಣಿ ಹೊಂದಿದ್ದು, ಪಕ್ಕದಲ್ಲಿ ಕೊಳಚೆ ನೀರು, ವಿಷ ಪೂರಿತ ಕ್ರಿಮಿ ಕೀಟಗಳು, ತೂತು ಬಿದ್ದ ಪಾತ್ರೆ, ಹರಿದು ಹೋದ ಬಟ್ಟೆ, ಮಕ್ಕಳ ಮೈಯೆಲ್ಲ ಮಣ್ಣಿನ ಕಣ…ಇದು ಅವರ ಬದುಕಿನ ಚಿತ್ರಣ.

Advertisement

ಇತಿಹಾಸದತ್ತ ನೋಡುವುದಾದರೆ ಭಾರತಕ್ಕೆ ವಲಸೆ ಬಂದಿದ್ದ ಆರ್ಯರ ಜತೆ ಈ ಜನಾಂಗವೂ ಬಂದಿರಬೇಕು ಎನ್ನಲಾಗುತ್ತಿದೆ. ಇಂದಿಗೂ ಅವರೆಲ್ಲ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ಹೊಟ್ಟೆಯ ಚೀಲವನ್ನು ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುವವರು. ಪ್ರಾಚೀನ ಕಾಲದಲ್ಲಿ ಬೇಟೆಯಾಡುವುದು, ಮೀನು ಹಿಡಿಯುವುದು, ಪಶುಪಾಲನೆ ಮುಂತಾದ ಕೆಲಸ ಮಾಡುತ್ತಾ ಅಲೆಮಾರಿಗಳಾಗಿ ಬದುಕುತ್ತಿದ್ದರು. ಇಂದಿಗೂ ಅದು ಮುಂದುವರಿದಿದೆ. ಲಾಕ್‌ಡೌನ್‌ ಸಮಯದಲ್ಲಿ ಇವರು ಅನುಭವಿಸಿದ ಕಷ್ಟ ಹೇಳ ತೀರದು. ಲಂಬಾಣಿ, ಒಡ್ಡರು, ಕೊರಚ, ಕೊರಮ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂದಿಜೋಗಿ, ಸೋಲಿಗರು, ಇರುಳಿಗರು, ಯರವರು ಮುಂತಾದ ಜನಾಂಗದವರು ಯಾತನೆಯನ್ನು ಅನುಭವಿಸುತ್ತಾ ಬಂದಿರುವವರು.

ಲಂಬಾಣಿಗಳು ಮೊದಲಿಗೆ ಉಪ್ಪು ಮುಂತಾದ ಸಾಮಗ್ರಿಗಳನ್ನು ಎತ್ತುಗಳ ಮೇಲೆ ಸಾಗಿಸಿ ಮಾರಾಟ ಮಾಡಲು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಿದ್ದರು, ಲಂಬಾಣಿ ಹೆಂಗಸರು ಗುಡ್ಡಗಾಡಿನಲ್ಲಿ ಸೌದೆ, ಹಣ್ಣು ಹಂಪಲು ಕೂಡಿಟ್ಟು ಹಳ್ಳಿಗಳಲ್ಲಿ ಮಾರಿ ಹಣವನ್ನು ಧಾನ್ಯ ಸಂಪಾದಿಸುತ್ತಾರೆ, ಡೊಂಬರರು ಅನೇಕ ತರಹದ ತಮಾಷೆ ಆಟಗಳನ್ನು ಆಡುತ್ತ, ಅಲೆಯುತ್ತ ಸಂಪಾದಿಸುತ್ತಾರೆ, ಹಾವಾಡಿಗರು ಹಾವನ್ನು ಆಡಿಸುತ್ತ ಅನ್ನದ ದಾರಿ ಕಂಡು ಕೊಳ್ಳುತ್ತಾರೆ, ಕಿಳ್ಳೇಕ್ಯಾತರು ಬೊಂಬೆ ಆಟ ಆಡಿಸುತ್ತಾ ಅಲೆಯುತ್ತಾರೆ, ಕೊರಚ ಕೊರಮರು ಈಚಲು ಗರಿಯ ಪೊರಕೆ, ಚಾಪೆ, ಬುಟ್ಟಿಗಳನ್ನು ಹೆಣೆದು ಊರು ಊರಲ್ಲಿ ಮಾರುತ್ತಾರೆ, ಹಂದಿಜೋಗಿಗಳು ನಾರು ಬೇರುಗಳಿಂದ ಕಷಾಯ ಮತ್ತು ಔಷಧ ತಯಾರಿಸಿ ಮರಾಟ ಮಾಡಿ ಆದಾಯ ಕಂಡುಕೊಳ್ಳುತ್ತಾರೆ, ಬುಡಬುಡಿಕೆ ಜನಾಂಗದ ಜನರು ಹಕ್ಕಿಗಳನ್ನು ಹಿಡಿದು ಶಕುನ ಹೇಳಿ ಧಾನ್ಯ ಸಂಪಾದಿಸುತ್ತಾರೆ…ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ-ವ್ಯಥೆ. ಮಳೆ, ಗಾಳಿ, ಕತ್ತಲು, ಬಿಸಿಲು ಎನ್ನದೇ ಬದುಕುವರು ಇವರು.

ಎಷ್ಟೋ ಮಂದಿ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಲಾಗದೆ ವೇದನೆ ಅನುಭವಿಸುತ್ತಾರೆ. ರಾಜಕೀಯ ನಾಯಕರು, ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಅಲೆಮಾರಿಗಳ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ.

ಭೋವಿ ರಾಮಚಂದ್ರ, ಹರಪನಹಳ್ಳಿ, ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next