ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ 200ಕ್ಕೂ ಹೆಚ್ಚು ಸ್ವತ್ತುಗಳಿಗೆ “ಎ’ ಖಾತಾ ಮಾಡುವ ಮೂಲಕ ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರೂ. ವಂಚಿಸಿದ ಆರೋ ಪದಡಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತ ವಿ.ಅಜಯ್ ನೀಡಿದ ದೂರಿನ ಮೇರೆಗೆ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧ ಆರ್. ಆರ್.ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪೈಕಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಗ್ಗಿಯನ್ನು ಬಂಧಿಸಲಾಗಿದೆ.
ಮತ್ತೂಬ್ಬ ಆರೋಪಿ ಸಹಾಯಕ ಕಂದಾಯ ಅಧಿಕಾರಿ ದೇವರಾಜ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ವಿ.ಅಜಯ್ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ “ಎ’ ಮತ್ತು “ಬಿ’ ಖಾತಾಗಳಿಗೆ ಸಂಬಂಧಿಸಿದ ಕಡತಗಳನ್ನು ಸ್ಕ್ಯಾನಿಂಗ್ ಮಾಡಿ ಅಪ್ ಲೋಡ್ ಮಾಡಬೇಕಾಗುತ್ತದೆ. ಈ ವೇಳೆ ಕೆಂಗೇರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಸಹಾಯಕ ಕಂದಾಯ ಅಧಿಕಾರಿ ಹೊಸದಾಗಿ ಒಂದು “ಎ’ ಖಾತಾಗೆ ಸಂಬಂಧಿಸಿದ ಕಡತವನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ.
ಈ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ರಾಜರಾಜೇಶ್ವರಿ ನಗರನಗರ ವಲಯ ಉಪ ಆಯುಕ್ತರಿಗೆ ಸೂಚಿಸಿದ್ದರು. ಈ ಸೂಚನೆ ಮೇರೆಗೆ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡಲು ಮೂವರು ಅಧಿಕಾರಿಗಳ ಒಂದು ತಂಡ ರಚಿಸಲಾಗಿತ್ತು. ಈ ತಂಡವು ದಾಖಲೆಗಳನ್ನು ಪರಿಶೀಲಿಸಿ, ಆರೋಪಿಗಳಾದ ಬಸವರಾಜ ಮಗ್ಗಿ ಮತ್ತು ದೇವರಾಜ್ ಅವರನ್ನು ವಿಚಾರಣೆ ಮಾಡಿತ್ತು.
ಈ ವೇಳೆ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಮಾಡಿ 200ಕ್ಕೂ ಅಧಿಕ ಸ್ವತ್ತುಗಳಿಗೆ “ಎ’ ಖಾತಾ ಮಾಡಿ, ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತ ವಿ.ಅಜಯ್ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.