ಕಲಘಟಗಿ: ಸ್ವಾತಂತ್ರ್ಯ ದೊರಕಿ 75 ವರ್ಷಗಳು ಕಳೆದಿದ್ದು, ಸ್ವಾತಂತ್ರ್ಯ ಹೋರಾಟದ ಸಾವು-ನೋವು, ಹೋರಾಟಗಾರರು ಅನುಭವಿಸಿರುವ ಕಷ್ಟಗಳ ಕುರಿತು ಅರಿಯದ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದಲ್ಲದೇ ಯುವಜನರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸುವ ಸದುದ್ದೇಶದಿಂದ ವಿಶ್ವದಾಖಲೆಯ ತ್ರಿವರ್ಣಧ್ವಜದ ಜಾಥಾ ಮತಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.
76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅವಿಸ್ಮರಣೀಯಗೊಳಿಸಲು ದೇಶಾಭಿಮಾನದ 9 ಅಡಿ ಅಗಲ 9 ಕಿಲೋಮೀಟರ್ ಉದ್ದದ ಇತಿಹಾಸ ನಿರ್ಮಿತ ತ್ರಿವರ್ಣ ಧ್ವಜದ ಮೆರವಣಿಗೆ ಸೋಮವಾರ ತಾಲೂಕಿನ ದಾಸ್ತಿಕೊಪ್ಪದಿಂದ ಪಟ್ಟಣದಲ್ಲಿ ಹಾಯ್ದು ಗಲಗಿನಗಟ್ಟಿ ಕ್ರಾಸ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದ ನಂತರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನ ಪ್ರೋವಿಜನಲ್ ಸರ್ಟಿಫಿಕೇಟ್ ಸಂತೋಷ ಲಾಡ್ ಫೌಂಡೇಶನ್‌ಗೆ ನೀಡಿರುವುದನ್ನು ಇಂದಿಲ್ಲಿ ಸ್ವೀಕರಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿ ದೇಶಾಭಿಮಾನವನ್ನು ಇಂದಿನ ಯುವಶಕ್ತಿಗೆ ತುಂಬುವುದು ಅತೀ ಅವಶ್ಯ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಖಾಸುಮ್ಮನೆ ದೊರಕಿಲ್ಲ ಎಂಬುದನ್ನು ಪ್ರತಿಯೊಬ್ಬ ಪ್ರಜೆಗೂ ಮನನ ಮಾಡಲು ದೇಶದ ಪ್ರಧಾನಮಂತ್ರಿಗಳು ಹರ್ ಘರ್ ತಿರಂಗಾ ಹಮ್ಮಿಕೊಂಡಿದ್ದರು. ಅದೇ ನಿಟ್ಟಿನಲ್ಲಿ ತ್ರಿವರ್ಣಧ್ವಜ ಜಾಥಾಕ್ಕೆ ಮತಕ್ಷೇತ್ರದ ಜನತೆ ಸಾಥ್ ನೀಡಿದ್ದು, ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿಸಿ ಕೊಂಡಿರುವ ನಾವೆಲ್ಲರೂ ಅದೃಷ್ಟವಂತರು. ವ್ಯಾಪಾರ ವಹಿವಾಟಿಗೆ ನಮ್ಮ ದೇಶಕ್ಕೆ ಬಂದ ಬ್ರಿಟೀಷರು 267 ವರ್ಷಗಳ ಕಾಲ ನಮ್ಮನ್ನಾಳುವುದರೊಂದಿಗೆ ಗುಲಾಮಗಿರಿಯ ಬಾಳನ್ನು ನಮ್ಮ ಪೂರ್ವಜರಿಗೆ ನೀಡಿದ್ದರು ಎಂಬುದನ್ನು ಮರೆಯಬಾರದು. ಸಹಸ್ರಾರು ಮಹನೀಯರುಗಳ ತ್ಯಾಗ-ಬಲಿದಾನದಿಂದ 1947ರ ಅಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿದೆ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಅವಶ್ಯಕತೆ ತುಂಬಾ ಇದೆ. ಇದನ್ನು ನಾವೆಲ್ಲರೂ ಅರಿತು ಮುಂದಿನವರಿಗೂ ತಿಳಿಸಬೇಕಾಗಿದೆ ಎಂದರು.
ವಿಶ್ವದಾಖಲೆಯ ತ್ರಿವರ್ಣಧ್ವಜದ ಜಾಥಾದಲ್ಲಿ ಸುಮಾರು ಒಂದು ಲಕ್ಷದಷ್ಟು ಜನರು ದೇಶಾಭಿಮಾನದಿಂದ ಪಾಲ್ಗೊಂಡಿದ್ದರು. ಸಂತೋಷ ಲಾಡ್ ಫೌಂಡೇಶನ್ ಮೂಲಕ ಪ್ರತಿ ಮುನ್ನೂರು ಮೀಟರ್ ಅಂತರದಲ್ಲಿ ಸುಮಾರು 30-40 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು 100 ಕ್ವಿಂಟಲ್ ಅಕ್ಕಿಯ ಪಲಾವ್ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಹಸ್ರಾರು ಮಹನೀಯರ ತ್ಯಾಗ-ಬಲಿದಾನದ ಫಲವಾಗಿ ಸ್ವಾತಂತ್ರ್ಯ ದೊರಕಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಇಂದು ನಾವೆಲ್ಲರೂ ಸುಖ-ನೆಮ್ಮದಿಯಿಂದ ಬಾಳು ನಡೆಸುತ್ತಿದ್ದರೆ ನಮ್ಮ ದೇಶದ ಸೈನಿಕರ ಶ್ರಮ ಹಾಗೂ ರೈತರು ನೀಡುತ್ತಿರುವ ಸೇವೆಯೇ ಕಾರಣವಾಗಿದೆ. ಕಾರಣ ಪ್ರತಿಯೊಬ್ಬರೂ ಸಂವಿಧಾನಾತ್ಮಕವಾಗಿ ದೇಶಾಭಿಮಾನದೊಂದಿಗೆ ಬದುಕಬೇಕಾಗಿದೆ. –
ಸಂತೋಷ ಲಾಡ್ ಮಾಜಿ ಸಚಿವ