ಉಡುಪಿ: ಲೋಕಶಾಂತಿ ಮತ್ತು ಭಾವೈಕ್ಯಕ್ಕಾಗಿ ತನ್ನ ವ್ಹೀಲ್ ಚೇರ್‌ನಲ್ಲಿಯೇ ಅಯೋಧ್ಯೆಗೆ ಹೊರಟಿದ್ದಾರೆ ಸುಮಾರು 60 ವರ್ಷದ ವೃದ್ಧರಾದ ಸವದತ್ತಿ ಮೂಲದ ಮಂಜುನಾಥ್. 2021ರಲ್ಲಿ ಉತ್ತರಾಖಂಡ ದಿಂದ ಯಾತ್ರೆ ಆರಂಭಿಸಿದ ಅವರು ಉಡುಪಿಗೆ ಆಗಮಿಸಿದ್ದರು. ವಿಶೇಷ ಅಂದರೆ ಇವರು ವೀಲ್‌ಚೇರ್‌ನಲ್ಲಿಯೇ
ಪ್ರಯಾಣಿಸುತ್ತಿದ್ದಾರೆ.
ಈಗ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ತಲುಪುವ ಮಹಾದಾಸೆ ಹೊಂದಿದ್ದಾರೆ. ಈಗಾಗಲೇ ತಿರುಪತಿ, ರಾಮೇಶ್ವರ, ಕನ್ಯಾಕುಮಾರಿ, ಕೂಡಲಸಂಗಮ, ಚನ್ನಬಸವೇಶ್ವರ, ಮಹಾಲಕ್ಷ್ಮೀ ಕೋಲಾಪುರ, ಪಂಡರೀಪುರ, ಧರ್ಮಸ್ಥಳ ಮತ್ತು ಇನ್ನಿತರ ಹಲವು ದೇವಸ್ಥಾನಗಳನ್ನು ದರ್ಶನ ಮಾಡಿರುವ ಅವರು ಉಡುಪಿಯ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪ್ರಯಾಣ ಆರಂಭಿಸುವ ಅವರು ಕತ್ತಲಾಗುವವರೆಗೂ ಆದಷ್ಟು ದೂರ ಕ್ರಮಿಸುತ್ತಾರೆ. ರಾತ್ರಿ ವೇಳೆ ದೇವಸ್ಥಾನ ಅಥವಾ ಇನ್ನಿತರ ಕಡೆಗಳಲ್ಲಿ ನಿಂತು ಮರುದಿನ ಮತ್ತೆ ಪ್ರಯಾಣ ಮುಂದುವರಿಸುತ್ತಾರೆ.
ಈ ಹಿಂದೆಯೂ ಇವರು ಎರಡು ಬಾರಿ ಸೈಕಲ್‌ನಲ್ಲಿ ಇಂತಹದೇ ಯಾತ್ರೆ ಕೈಗೊಂಡಿದ್ದರು. ಆದರೆ ಆ ಬಳಿಕ ಅಪಘಾತವಾಗಿ ಒಂದು ಕಾಲಿನ ಬಲವನ್ನೇ ಕಳೆದುಕೊಂಡಿದ್ದು ನಡೆಯಲಾಗದ ಸ್ಥಿತಿಯಲ್ಲಿ ಅವರಿದ್ದಾರೆ. ಆದರೂ ಛಲಬಿಡದೆ ಮುನ್ನಡೆಯುತ್ತಿದ್ದಾರೆ. ಅಯೋಧ್ಯೆ ಉದ್ಘಾಟನೆಗೂ ಮುನ್ನ ತಲುಪುವ ಬಗ್ಗೆ ಅವರಿಗೆ ನಿಖರತೆ ಇಲ್ಲದಿದ್ದರೂ ಒಂದು ದಿನ ಅಲ್ಲಿಗೆ ತೆರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.