ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯ 52 ವರ್ಷದ ನೌಶಾದ್ ಎಂಬ ಬೀದಿ ಬದಿಯ ಬಟ್ಟೆ ವ್ಯಾಪಾರಿ ತಾನು ಬಕ್ರಿದ್ ಹಬ್ಬದ ಮಾರಾಟಕ್ಕೆಂದು ಇರಿಸಿದ್ದ ಹೊಸ ಬಟ್ಟೆಗಳ ಸ್ಟಾಕ್ ಅನ್ನು ನೆರೆ ಸಂತ್ರಸ್ತರಿಗೆ ನೀಡಿದ ಕಾರ್ಯದಿಂದ ಹಲವರು ಪ್ರೇರಣೆ ಹೊಂದಿದ್ದಾರೆ.
ರಾಜೇಶ್ ಶರ್ಮಾ ಎಂಬವರು ಫೇಸ್ಬುಕ್ ಲೈವ್ ಮಾಡಿದ ನೌಶದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇದರಿಂದ ಪ್ರೇರಣೆ ಪಡೆದ ಹಲವರು ತಾವು ಹಬ್ಬದ ಖರ್ಚಿಗೆಂದು ತೆಗೆದಿರಿಸಿದ್ದ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ. ದುಬಾಯಿಂದಲೂ ಹಲವರು ನೌಶದ್ ಅವರ ಈ ಕಾರ್ಯದಿಂದ ಪ್ರೇರಣೆ ಹೊಂದಿದ್ದಾರೆ ಎಂಬುದನ್ನು ಸ್ವತಃ ನೌಶದ್ ಅವರೇ ಮಾಧ್ಯದವರಿಗೆ ತಿಳಿಸಿದ್ದಾರೆ.
ತನ್ನ ಈ ಕಾರ್ಯದಿಂದ ತನಗೆ ಸಿಗುತ್ತಿರುವ ಪ್ರಚಾರ ಮತ್ತು ಖ್ಯಾತಿಯ ಕುರಿತಾಗಿ ನೌಶದ್ ತಲೆಕೆಡಿಸಿಕೊಂಡಿಲ್ಲ. ‘ನನಗೇನೂ ಇದು ಹೊಸದಲ್ಲ. ಕಳೆದ ಬಾರಿಯೂ ಭೀಕರ ನೆರೆ ಕೇರಳವನ್ನು ತತ್ತರಿಸುವಂತೆ ಮಾಡಿದ್ದ ಸಂದರ್ಭದಲ್ಲೂ ನಾನು ಸಂತ್ರಸ್ತರಿಗೆ ಬಟ್ಟೆಗಳ ನೆರವನ್ನು ನೀಡಿದ್ದೆ. ಈ ಬಾರಿ ನನ್ನ ಈ ಕಾರ್ಯವನ್ನು ಸಹೃದಯಿಯೊಬ್ಬರು ವಿಡಿಯೋ ಮಾಡಿದ್ದರಿಂದ ಇದು ಎಲ್ಲರಿಗೂ ತಿಳಿಯುವಂತಾಯ್ತು..’ ಎಂದು ವಿನಮ್ರರಾಗುತ್ತಾರೆ ನೌಶದ್ ಅವರು.
ನಮ್ಮ ಜೊತೆಗಾರರು ಸಂಕಷ್ಟದಲ್ಲಿರುವಾಗ ನಾವು ಹೇಗೆ ತಾನೆ ಸಂಭ್ರಮದಿಂದ ಹಬ್ಬ ಆಚರಿಸಿಕೊಳ್ಳಲು ಸಾಧ್ಯ? ನಾನು ಈದ್ – ಅಲ್ – ಅದಾ ವನ್ನು ಆಚರಿಸುವ ರೀತಿ ಹೀಗೆಯೇ ಆಗಿದೆ ಎಂದು ನೌಶದ್ ಅವರು ನುಡಿಯುತ್ತಾರೆ. ನೌಶದ್ ಅವರು ಎರ್ನಾಕುಲಂನ ರಸ್ತೆಬದಿಯಲ್ಲಿ ಹಲವಾರು ವರ್ಷಗಳಿಂದ ಬಟ್ಟೆ ವ್ಯಾಪಾರವನ್ನು ನಡೆಸುತ್ತಿದ್ದಾರೆ.
ನೌಶದ್ ಅವರ ಈ ನಿಸ್ವಾರ್ಥ ಕಾರ್ಯಕ್ಕೆ ಸಿನಿ ತಾರೆಗಳಿಂದ ಹಿಡಿದು ಸಮಾಜದ ಎಲ್ಲಾ ವರ್ಗದ ಜನರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು