ಉಡುಪಿ/ಮಂಗಳೂರು: ನಾಡಿನಾದ್ಯಂತ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಅ. 26ರ ಸಂಜೆ ನೀರು ತುಂಬುವುದು, ಅ. 27ರ ಬೆಳಗ್ಗೆ 5.22ಕ್ಕೆ ಚಂದ್ರೋದಯದ ವೇಳೆ ಎಣ್ಣೆ ಹಚ್ಚಿ ಸ್ನಾನ (ತೈಲಾಭ್ಯಂಗ), ಸಂಜೆ ದೀಪಾವಳಿ ಆಚರಣೆ, ಅ. 28ರ ಬೆಳಗ್ಗೆ 10 ಗಂಟೆ ಬಳಿಕ ಗೋಪೂಜೆ, ಸಂಜೆ ತುಳಸೀಪೂಜೆ ಆರಂಭವಾಗುತ್ತದೆ.
ಶ್ರೀಕೃಷ್ಣ ಮಠದಲ್ಲಿ ಮತ್ತು ಮೂಲ್ಕಿ ಶಾಂಭವೀ ನದಿ ಉತ್ತರ ಭಾಗ, ಉಡುಪಿ ಜಿಲ್ಲೆಯಲ್ಲಿ ಇದೇ ರೀತಿಯ ಆಚರಣೆ ನಡೆಯಲಿದೆ. ಆದರೆ ಶಾಂಭವೀ ನದಿ ದಕ್ಷಿಣ ಭಾಗ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ಅ. 28ರ ರಾತ್ರಿ ದೀಪಾವಳಿ ಆಚರಣೆ ನಡೆಯಲಿದೆ. ಉಳಿದಂತೆ ಎಲ್ಲ ಆಚರಣೆಗಳು ಒಂದೇ ತೆರನಾಗಿರುತ್ತವೆ.
ನೀರು ತುಂಬುವ ಹಬ್ಬವನ್ನು ಜಲಪೂರಣ, ಗಂಗಾ ಪೂಜೆ ಎಂದು ಕರೆಯುತ್ತಾರೆ. ಸಂಜೆ ಯಾದ ಬಳಿಕ ಗಂಗೆಯನ್ನು ಸ್ಮರಿಸಿಕೊಂಡು ಸ್ನಾನ ಮಾಡುವ ಹಂಡೆಗೆ ನೀರು ತುಂಬಿಸುವುದು ಕ್ರಮ. ಮರುದಿನ ಬೆಳಗ್ಗೆ ಎಣ್ಣೆ ಹಚ್ಚಿ ಸ್ನಾನವನ್ನು ಮಾಡುವ ಕ್ರಮವಿದೆ. ದೀಪಾವಳಿ ಆಚರಣೆಯಲ್ಲಿ ದೇವಸ್ಥಾನ, ಗದ್ದೆ, ಮನೆಗಳಲ್ಲಿ ಹಣತೆ ದೀಪವನ್ನು ಬೆಳಗಿಸಿ ಪೂಜಿಸಲಾಗುತ್ತದೆ. ಮನೆಯ ಎಲ್ಲ ಭಾಗಗಳಿಗೂ ಹರಿವಾಣದಲ್ಲಿ ದೀಪವನ್ನು ಇರಿಸಿ ತೋರಿಸಲಾಗುತ್ತದೆ. ಇದೇ ಸಂದರ್ಭ ಬಲೀಂದ್ರನನ್ನು ಕರೆದು ಪೂಜಿಸಲಾಗುತ್ತದೆ. ಗೋಪೂಜೆಯಂದು ಗೋವುಗಳಿಗೆ ಪೂಜಿಸಿ ಅವುಗಳಿಗೆ ಆಹಾರವನ್ನು ನೀಡುವುದು ಕ್ರಮ. ವಿವಿಧ ಗೋಶಾಲೆಗಳಲ್ಲಿ ಇದನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಅ. 28ರಂದು ಆರಂಭವಾಗುವ ತುಳಸೀ ಪೂಜೆ ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ವರೆಗೆ 12 ದಿನಗಳ ಕಾಲ ನಡೆಯುತ್ತದೆ. ಉತ್ಥಾನ ದ್ವಾದಶಿ ಬಳಿಕ ದೇವಸ್ಥಾನಗಳ ವಾರ್ಷಿಕ ಉತ್ಸವಾದಿಗಳು ಆರಂಭಗೊಳ್ಳುತ್ತದೆ. ಶ್ರೀಕೃಷ್ಣಮಠದಲ್ಲಿ ದ್ವಾದಶಿಯಂದು ಉತ್ಸವ ಮೂರ್ತಿಯನ್ನು ಹೊರಗೆ ತೆಗೆದು ಉತ್ಸವವನ್ನು ಆರಂಭಿಸುತ್ತಾರೆ. ಲಕ್ಷದೀಪೋತ್ಸವ ಆರಂಭವಾಗು ವುದು ಇದೇ ದಿನ (ನ. 9). ನ. 8ರಂದು ಏಕಾದಶಿ. ನ. 7ರಂದು ನಾಲ್ಕು ತಿಂಗಳ ಚಾತುರ್ಮಾಸ್ಯವ್ರತದ ಭಿನ್ನವಾದ ಆಹಾರ ಕ್ರಮ ಮುಕ್ತಾಯಗೊಂಡು ನ. 9ರಿಂದ ಸಾಮಾನ್ಯ ಆಹಾರ ಕ್ರಮ ಆರಂಭವಾಗುತ್ತದೆ.