ಲಕ್ಷ್ಮೇಶ್ವರ: ಹುಲ್ಲೂರ ಗ್ರಾಪಂ ವ್ಯಾಪ್ತಿಯ ನೆಲೂಗಲ್ ಗ್ರಾಮದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ 24 ವರ್ಷದ ದೇವೇಂದ್ರ ಲಮಾಣಿ 670 ಮತಗಳ ಹೆಚ್ಚಿನ ಅಂತರದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟು 770 ಮತದಾನವಾಗಿದ್ದು, ಅದರಲ್ಲಿ 670 ಮತ ಈತನ ಪಾಲಾಗಿವೆ.
ಕೃಷಿ ಕುಟುಂಬದವರಾಗಿದ್ದು ಐಟಿಐ ಓದಿರುವ ಈತ ಸಾಮಾಜಿಕ ಸೇವೆ ಮಾಡುವ ಮನೋಭಾವ ಹೊಂದಿ ಚುನಾವಣೆಗೆ ಸ್ಪರ್ಧಿಸಿದ್ದ. ಇನ್ನು ಬಾಲೇಹೊಸೂರ ಗ್ರಾಪಂನಲ್ಲಿ ಸಹೋದರ ಸಂಬಂಧಿಗಳಾದ ನೀಲಪ್ಪ ಮಾಯಕೊಂಡ ಮತ್ತು ಶಿವಪುತ್ರಪ್ಪ ಮಾಯಕೊಂಡ ನಡುವೆ ನೇರ ಸ್ಪರ್ಧೆಏರ್ಪಟ್ಟು ನೀಲಪ್ಪ ಮಾಯಕೊಂಡ 2 ಮತಗಳ ಅಂತರದ ಗೆಲುವಾಗಿದೆ.
ಶಿಗ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೂಬ್ಬ ಸದಸ್ಯರು 4 ಮತಗಳ ಅಂತರದ ಗೆಲುವು ಸಾಧಿಸಿದರು. ಇದನ್ನು ಪ್ರಶ್ನಿಸಿದ ಪ್ರತಿಸ್ಪರ್ಧಿಗಳು ಮರು ಎಣಿಕೆಗೆ ಒತ್ತಾಯಿಸಿದರು. ಆದರೆ ತಹಶೀಲ್ದಾರ್ ಸೇರಿ ಚುನಾವಣಾಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ.
ಇದನ್ನೂ ಓದಿ:ಮಾರಕಾಸ್ತ್ರದಿಂದ ಕೊಚ್ಚಿ ಮಹಿಳೆ ಹತ್ಯೆ
ಶಿಗ್ಲಿ ಬಸ್ಯಾನ ಪತ್ನಿಗೆ ಗೆಲುವು: ಆಗಾಗ ರಾಜ್ಯದ ಜನರ ಗಮನ ಸೆಳೆಯುವ ಶಿಗ್ಲಿ ಬಸ್ಯಾ (ಬಸವರಾಜ್ ಗಡ್ಡಿ) ಅವರ ಮಡದಿ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿಗ್ಲಿ ಗ್ರಾಪಂನ 1ನೇ ವಾರ್ಡ್‌ನಿಂದ ಪತ್ನಿ ಗುಲ್ಜಾರಾಬಾನು ಶೇಖ್ ಅವರನ್ನು ಕಣಕ್ಕಿಳಿಸಿದ್ದರು. ಯಾವ ಪಕ್ಷದವರೂ ಬೆಂಬಲ ನೀಡದ್ದರಿಂದ ಕಬ್ಬಿನ ರೈತ ಚಿತ್ರದಡಿ ಪಕ್ಷೇತರರಾಗಿ ಸ್ಪರ್ಧಿ ಗೆಲುವಿಗಾಗಿ ಮತಯಾಚನೆ ಮಾಡಿದ್ದರು. ಈ ವಾರ್ಡ್‌ನ ಮಹಿಳಾ ಅ ವರ್ಗದ ಮೀಸಲಾತಿಯಡಿ ಒಂದು ಸದಸ್ಯ ಸ್ಥಾನಕ್ಕೆ 3 ಜನ ಪ್ರತಿಸ್ಪರ್ಧಿಗಳಿದ್ದರು. ಕೇವಲ 2 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.