ಪತ್ರಿಕಾಭವನ: ಮಂಗಳೂರು ಮೂಲದ 13ರ ಹರೆಯದ ಬಾಲಕ ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಲಿಡಿವಿನ್ ಡಿ’ಕೋಸ್ಟಾ ಮತ್ತು ವಿನ್ಸೆಂಟ್ ಡಿ’ಕೋಸ್ಟಾ ಅವರ ಪುತ್ರ ಬಜಪೆ ಸೈಂಟ್ ಜೋಸೆಫ್ ಹೈಸ್ಕೂಲ್‌ನ ವಿದ್ಯಾರ್ಥಿ ವರುಣ್ ಡಿ’ಕೋಸ್ಟಾ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತರಬೇತುದಾರ ವಿಜೇ ಡಿಕ್ಸನ್ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯು ಫ್ಯಾಶನ್, ಮಾಡೆಲಿಂಗ್ ಹಾಗೂ ಪ್ರತಿಭಾ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಆ. 7ರಿಂದ 10ರ ವರೆಗೆ ಥೈಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೆರಿಕ, ಲೆಬನಾನ್, ಅರ್ಮೇನಿಯಾ, ಯುಎಇ, ಓಮನ್, ಥೈಲ್ಯಾಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಲ ಸಹಿತ ಹಲವಾರು ದೇಶಗಳಿಂದ ಪಾಲ್ಗೊಂಡ ಸ್ಪರ್ಧಿಗಳು ಭಾಗವಹಿಸಿದ್ದರು. ಇದಕ್ಕೂ ಮುನ್ನ ಕ್ಯಾಲಿಕಟ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿ ವರುಣ್ ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಿ ಜಯಗಳಿಸಿದ್ದಾರೆ ಎಂದರು.
ಮುಂಬರುವ ದಿನದಲ್ಲಿ ಮಿಸ್ಟರ್ ಇಂಡಿಯಾ ಆಗಬೇಕೆಂಬ ಆಸೆಯಿದ್ದು, ಇಂಡಿಯನ್ ಬೆಸ್ಟ್ ಡ್ಯಾನ್ಸರ್ ಸಹಿತ ಎಲ್ಲ ಸ್ಪರ್ಧಾತ್ಮಕ ಶೋಗಳಲ್ಲಿ ಭಾಗವಹಿಸುವ ಇಚ್ಛೆ ಇದೆ ಎನ್ನುತ್ತಾರೆ ವರುಣ್ ಡಿ’ಕೋಸ್ಟಾ.
ಪತ್ರಿಕಾಗೋಷ್ಠಿಯಲ್ಲಿ ವರುಣ್ ತಾಯಿ ಲಿಡ್ವಿನ್ ಡಿ’ಕೋಸ್ಟಾ, ವಿನಾಲ್ ಡಿ’ಕೋಸ್ಟಾ ಮೊದಲಾದವರು ಉಪಸ್ಥಿತರಿದ್ದರು.