ಉಡುಪಿ: ಬನ್ನಂಜೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಎ. 11ರಂದು ಉದ್ಘಾಟನೆಗೊಳ್ಳಲಿದೆ.
ಉದ್ಘಾಟನೆಯ ಅನಂತರವೂ ಪೂರ್ಣ ವ್ಯವಸ್ಥೆ ಆಗುವವರೆಗೂ ಈಗಿರುವ (ನಗರಸಭೆ ಕಟ್ಟಡದಲ್ಲಿ ಸರ್ವಿಸ್ ಬಸ್ ನಿಲ್ದಾಣದ ಸಮೀಪ) ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲೆ ಸಾರ್ವಜನಿಕರಿಗೆ ಸೇವೆ ಲಭ್ಯವಾಗುವುದು. ಎಲ್ಲ ವ್ಯವಸ್ಥೆಗಳು ಸ್ಥಳಾಂತರಗೊಂಡ ಅನಂತರವೇ ಹೊಸ ಬಸ್ ನಿಲ್ದಾಣದಲ್ಲಿ ಸೇವೆ ಶುರುವಾಗಲಿದೆ.
ಏಕ ಕಾಲದಲ್ಲಿ 35 ಬಸ್ ನಿಲುಗಡೆ
ನಿತ್ಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮೊದಲಾದ ಸ್ಥಳಗಳಿಗೆ ಪ್ರಯಾಣಿಸುವ (ದೂರ ಪ್ರಯಾಣದ) ಸುಮಾರು 180 ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಉ.ಕ. ಜಿಲ್ಲೆಗೆ ಪ್ರಯಾಣಿಸುವ 60 ಬಸ್ ಸೇರಿದಂತೆ ವಿವಿಧ ರೂಟ್‌ಗಳ ಬೇರೆ ಬೇರೆ ಡಿಪೋಗೆ ಸೇರಿರುವ 240 ಬಸ್‌ಗಳು ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಹೊಸ ಬಸ್ ನಿಲ್ದಾಣದಲ್ಲಿ ಏಕಕಾಲದಲ್ಲಿ ಸುಮಾರು 35 ಬಸ್ ನಿಲ್ಲಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸುಮಾರು 30 ಕೋ.ರೂ. ವೆಚ್ಚದಲ್ಲಿ 2.50 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ಮಾಡಲಾಗಿದೆ. ವಿವಿಧ ಮಳಿಗೆಗಳು, ಶೌಚಾಲಯ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ನೋಂದಣಿ ಕೇಂದ್ರ, ಬೇಬಿ ಕೇರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್
ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಸಹಿತವಾಗಿ ಅತ್ಯಾಧುನಿಕವಾದ ಎಲ್ಲ ವ್ಯವಸ್ಥೆಯೂ ಇಲ್ಲಿದೆ. ಉದ್ಘಾಟನೆಯಾದ ದಿನದಿಂದಲೇ ಹೊಸ ಬಸ್ ನಿಲ್ದಾಣದಲ್ಲಿ ಸೇವೆ ಆರಂಭವಾಗುವುದಿಲ್ಲ. ಎಲ್ಲ ವ್ಯವಸ್ಥೆಗಳು ರೂಪುಗೊಂಡ ಬಳಿಕ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.
– ಶಿವರಾಮ ನಾಯ್ಕ, ಕೆಎಸ್ಸಾರ್ಟಿಸಿ ಉಡುಪಿ ಡಿಪೋ ವ್ಯವಸ್ಥಾಪಕ