ಹೈದರಾಬಾದ್ : ಈ ಪುಟ್ಟ ಬಾಲಕನ ಹೆಸರು ಸಯ್ಯದ ಅಜೀಜ್. ಈತನದು ಹೊಟ್ಟೆ ತುಂಬ ಉಂಡು, ಸ್ನೇಹಿತರೊಂದಿಗೆ ಆಟವಾಡಿ ನಕ್ಕು-ನಲಿಯುವ ವಯಸ್ಸು. ಆದರೆ, ಈ ಎಳೆಯ ಬಾಲಕ ಮಾತ್ರ ಬೀದಿಯಲ್ಲಿ ನಿಂತು ಹಕ್ಕಿಗಳಿಗೆ ಹಾಕುವ ಕಾಳುಗಳ ಮಾರಾಟದಲ್ಲಿ ತೊಡಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ವ್ಯಾಪಾರ ಮಾಡಿ ಹಣ ಗಳಿಸುತ್ತಿರುವುದು ತನ್ನ ಸಹೋದರಿಯ ಚಿಕಿತ್ಸೆಗಾಗಿ.
ಹೌದು, ಅಜೀಜ್ ನಿಗೆ 12 ವರ್ಷ ವಯಸ್ಸಿನ ಸಕೀನಾ ಹೆಸರಿನ ಸಹೋದರಿಯಿದ್ದಾಳೆ. ಕಳೆದ 2 ವರ್ಷಗಳಿಂದ ಈಕೆಗೆ ಬ್ರೈನ್ ಕಾನ್ಸರ್ ರೋಗ ಅಂಟಿಕೊಂಡಿದೆ. ಈಕೆಯ ಚಿಕಿತ್ಸೆಗಾಗಿ ತಂದೆ-ತಾಯಿ ಪಡಬಾರದ ಕಷ್ಟ ಪಟ್ಟಿದ್ದಾರೆ. ಸರ್ಕಾರದಿಂದ ದೊರೆತ ಆರ್ಥಿಕ ಸಹಾಯ ರೆಡಿಯೋ ಥೆರಪಿಗೆ ಸಾಕಾಗಿದೆ. ಆದರೆ, ಟ್ಯಾಬ್ಲೆಟ್ ಸೇರಿದಂತೆ ಇನ್ನಿತರ ಖರ್ಚಿಗಾಗಿ ಕಾಸಿಲ್ಲದಂತಾಗಿದೆ. ಮನೆಯ ಪರಿಸ್ಥಿತಿಯನ್ನು ಅರ್ಥೈಸಿಕೊಂಡ 10 ವರ್ಷ ವಯಸ್ಸಿನ ಬಾಲಕ ಅಜೀಜ್, ತನ್ನ ತಾಯಿಯ ಜೊತೆ ತಾನೂ ಬೀದಿ ಮೇಲೆ ನಿಂತು ಕಾಳು ಮಾರಾಟ ಮಾರುತ್ತಿದ್ದಾನೆ.
ಅಕ್ಕನನ್ನು ಬದುಕುಳಿಸಿಕೊಳ್ಳಲು ಅಪ್ಪ-ಅಮ್ಮನಿಗೆ ಸಹಾಯ ಮಾಡುತ್ತಿರುವ ಈ ಬಾಲಕ, ಮುಂಜಾನೆ 6 ಗಂಟೆಯಿಂದ 8 ಗಂಟೆಯವರೆಗೆ ಕಾಳು ಮಾರುತ್ತಾನೆ. 9 ಗಂಟೆಯಿಂದ ಸ್ಥಳೀಯ ಮದರಸಾವೊಂದಕ್ಕೆ ವಿದ್ಯಾಭ್ಯಾಸಕ್ಕೆ ತೆರಳುತ್ತಾನೆ. ಸಂಜೆ 5ರ ನಂತರ ಶಾಲೆಯಿಂದ ಹಿಂದುರುಗಿ ಮತ್ತೆ ವ್ಯಾಪಾರಕ್ಕೆ ನಿಲ್ಲುತ್ತಾನೆ.
ಕಿರಿಯ ವಯಸ್ಸಿನಲ್ಲಿಯೂ ಕುಟುಂಬದ ಕಷ್ಟಕ್ಕೆ ಸ್ಪಂದಿಸುತ್ತಿರುವ ಮಗನ ಕುರಿತು ಮಾತನಾಡುವ ಆತನ ತಾಯಿ ಬಿಲ್ಕೆಶ್ ಬೇಗಂ, ಮಗಳು ಸಕೀನಾ ಎರಡು ವರ್ಷದಿಂದ ಬ್ರೈನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಅವಳ ಚಿಕಿತ್ಸೆಗಾಗಿ ಇಡೀ ಕುಟುಂಬದವರು ಕಷ್ಟಪಡುತ್ತಿದ್ದೇವೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಹೇಳಿದಾಗ ತುಂಬ ಭಯವಾಗಿತ್ತು. ಅವಳು ರೆಡಿಯೋ ಥೆರಪಿಗೆ ಒಳಗಾಗಲೇ ಬೇಕು ಎಂದು ವೈದ್ಯರು ಸೂಚಿಸಿದರು. ನಾವು ತೆಲಂಗಾಣ ಸರ್ಕಾರದಿಂದ ಆರ್ಥಿಕ ಪರಿಹಾರ ನಿಧಿ ಪಡೆದೆವು. ಅದು ಅವಳ ಥೆರಪಿಗೆ ಸಾಕಾಯಿತು. ಆದರೆ, ನಂತರ ಆಸ್ಪತ್ರೆಗೆ ಖರ್ಚಿಗೆ ಹಣ ಇಲ್ಲದಂತಾಯಿತು.
ನಮ್ಮ ಮನೆಯ ಪರಿಸ್ಥಿತಿ ನೋಡಿದ ನನ್ನ ಮಗ ನಾನೂ ಸಹಾಯ ಮಾಡುತ್ತೇನೆ ಎಂದು ಮುಂದೆ ಬಂದ. ನನ್ನ ಜೊತೆ ಕಾಳು ಮಾರುತ್ತೇನೆ ಎಂದು ಹೇಳಿದ. ಈಗ ರಸ್ತೆಯ ಪಕ್ಕದಲ್ಲಿ ಬೇರೆ ಬೆಂಚ್ ಹಾಕಿಕೊಂಡು ಕಾಳು ಮಾರುತ್ತಾನೆ. ಇದರಿಂದ ಬಂದ ಹಣವನ್ನು ನಮ್ಮ ಕೈಗೆ ನೀಡುತ್ತಾನೆ. ಅದು ಮಗಳ ಎಕ್ಸ್ ರೇ, ರಕ್ತ ಪರೀಕ್ಷೆ ಸೇರಿದಂತೆ ಇನ್ನಿತರೆ ಖರ್ಚುಗಳಿಗೆ ಸಹಾಯವಾಗುತ್ತಿದೆ ಎಂದು ಕಣ್ಣೀರು ಸುರಿಸುತ್ತ ಹೇಳಿದ್ದಾರೆ ಅಜೀಜ್ ನ ತಾಯಿ.