(ಕಳೆದ ಸಂಚಿಕೆಯಿಂದ ಮುಂದುವರಿದಿದೆ) ಯಕ್ಷಗಾನ ಜಾನಪದ ಕಲೆ ಎಂದು ಪರಿಗಣಿಸಲ್ಪಟ್ಟಿದೆ ಆದರೂ ಅದರಲ್ಲಿ ಖಚಿತತೆ ಇದೆ.ತಾಳಗಳ ಲೆಕ್ಕಾಚಾರವಿದೆ. ಹಾಗಾಗಿ ಅದನ್ನು ಶಾಸ್ತ್ರೀಯ ಕಲೆ ಎನ್ನಲೂ ಬಹುದು. ತಾಳ, ಲಯ , ಶ್ರುತಿ , ವೇಷ ಭೂಷಣದಲ್ಲಿ ತನ್ನದೇ ಆದ ಚೌಕಟ್ಟು ಇದೆ. ಯಕ್ಷಗಾನದಲ್ಲಿ ತಿಟ್ಟುಗಳು ಬೇರೆ ಬೇರೆ ಇವೆ. ಹಲವು ಕಲಾವಿದರು ತಮ್ಮ ಪ್ರಭಾವ ಬೀರಿ ಚೌಕಟ್ಟಿನಲ್ಲಿಯೇ ಹೊಸ ಶೈಲಿಯನ್ನು ಜನಪ್ರಿಯಗೊಳಿಸಿದ್ದಾರೆ. ಶುದ್ಧ ಯಕ್ಷಗಾನದಲ್ಲಿ ಬೇರೆ ಕಲೆಗಳ ಮಿಶ್ರಣ ಮಾಡಿ ಹೊಸ ಶೈಲಿ ಹುಟ್ಟು ಹಾಕುವುದು ಸರಿಯಲ್ಲ ಎಂದರು.
ನೋಡಿ ಕುಂಜಾಲು ಶೈಲಿ, ಉಪ್ಪೂರರ ಶೈಲಿ ಬೇರೆ ಬೇರೆ ಆದರೂ ಅದರೆಡರಲ್ಲೂ ಹಿಂದೆ ಯಕ್ಷಗಾನ ಭಾಗವತಿಕೆಯ ಶುದ್ಧ ವಾತಾವರಣವಿತ್ತು. ಒಬ್ಬ ಕಲಾವಿದನಿಗಿಂತ ಇನ್ನೋಬ್ಬ ಕಲಾವಿದ ಭಿನ್ನವಾಗಿರುತ್ತಾರೆ ಯಾವುದೇ ರೀತಿಯ ಪ್ರಸ್ತುತಿ ಇದ್ದರೂ ಅದು ಸಂದರ್ಭಕ್ಕನುಗುಣವಾಗಿರುಬೇಕು ಎಂದರು.
ಸಂದರ್ಭಕ್ಕನುಗುಣವಲ್ಲದ ನಾಟ್ಯ,ಗಾಯನ,ಅಭಿನಯ ಪ್ರೇಕ್ಷಕರಿಗೆ ರಸಭಂಗವಾಗುತ್ತದೆ. ಈಗ ಅತೀ ಎನಿಸುವಂತ ಬದಲಾವಣೆಗಳು ಆಗಿ ಪ್ರೇಕ್ಷಕರು ರಸಭಂಗಕ್ಕೀಡಾಗುತ್ತಿದ್ದಾರೆ. ದುರಂತವೆಂದರೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಲೆಯನ್ನು ಬದಲಾಯಿಸಬೇಕಾಗಿದೆಯಲ್ಲ ಎಂದರು..!
ಹಲವು ಹಾಡುಗಳನ್ನು ಹಾಡಿ ತೋರಿಸಿದ ರಾಯರು…ಕೃಷ್ಣಾರ್ಜುನ ಕಾಳಗ, ಕರ್ಣಾರ್ಜುನ ಕಾಳಗ , ಪ್ರಮೀಳಾರ್ಜುನ ಪ್ರಸಂಗದ ಅಪರೂಪದ ಹಾಡುಗಳನ್ನು ನಮ್ಮೆದುರು ಹಾಡಿ ಇದಕ್ಕೆ ಅತೀಯಾಗಿ ನಾಟ್ಯ ಮಾಡಿದರೆ ಸರಿಯೇ? ನಿಮಗೇನಿಸುತ್ತದೆ ಎಂದು ಪ್ರಶ್ನಿಸಿದರು.
ಲೋಕೋ ಭಿನ್ನ ರುಚಿ ಎಂಬಂತೆ ಪ್ರೇಕ್ಷಕರು ಭಿನ್ನ ಭಿನ್ನ ಅಭಿರುಚಿ ಹೊಂದಿರುತ್ತಾರೆ.ಕೆಲವರಿಗೆ ಅರ್ಥಗಾರಿಕೆ ಬೇಕಾಗುತ್ತದೆ, ಇನ್ನು ಕೆಲವರಿಗೆ ನಾಟ್ಯವೇ ಇಷ್ಟವಾಗುತ್ತದೆ. ಸ್ತ್ರೀ ವೇಷದ ಅಭಿಮಾನಿಗಳು ಇರುತ್ತಾರೆ ಹೀಗಾಗಿ ಒಂದು ಪ್ರದರ್ಶನ ಎಲ್ಲರಿಗೂ ಖುಷಿ ನೀಡಿದೆ ಎಂದು ಹೇಳಲಾಗುವುದಿಲ್ಲ ಎಂದರು.
ಕೆಲ ಪ್ರಸಂಗಗಳಲ್ಲಿ ಹಾಸ್ಯಕ್ಕೆ ಹೆಚ್ಚು ಅವಕಾಶಗಳಿರುವುದಿಲ್ಲ. ಅಂತಹ ಪ್ರಸಂಗಗಳು ಕಲಾವಿದರಿಗೆ ಸವಾಲಾಗಿರುತ್ತದೆ ಆದರೂ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವುದಿಲ್ಲ, ಏನು ಮಾಡಲಿಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು.
ಯಕ್ಷಗಾನ ಯಾವಾಗಲು ಏಕವ್ಯಕ್ತಿಯಿಂದ ಯಶಸ್ವಿಯಾಗಲು ಸಾಧ್ಯವಿಲ್ಲ. ತಾಳ ಮೇಳ ಸರಿಯಾಗಿದ್ದರೆ ಮಾತ್ರ ಯಶಸ್ಸು ಎನ್ನುವ ಹಾಗೆಯೇ ಹಿಮ್ಮೇಳ, ಮುಮ್ಮೇಳದ ಎಲ್ಲಾ ಕಲಾವಿದರು ನ್ಯಾಯ ಒದಗಿಸಿದಾಗ ಮಾತ್ರ ಅದ್ಭುತವಾಗದ ಪ್ರದರ್ಶನ ಎನಿಸಿಕೊಳ್ಳುತ್ತದೆ ಎಂದರು.
ಒಟ್ಟಿನಲ್ಲಿ ಯಕ್ಷಗಾನ ಈಗ ಬದಲಾವಣೆ ಆದದನ್ನು ನೋಡಿದ್ದೇನೆ, ಇನ್ನು ಯಾವ ರೀತಿ ಬದಲಾವಣೆ ಆಗುತ್ತದೆಯೋ ನನಗೆ ಗೊತ್ತಿಲ್ಲ. ಪರಂಪರೆಯ ಚೌಕಟ್ಟುಗಳನ್ನು ಉಳಿಸಿ ಬೆಳೆಸಿ ಅದನ್ನು ರಂಗದಲ್ಲಿ ಬೆಳಗಿದರೆ ಮಾತ್ರ ಯಕ್ಷಗಾನ ಎನ್ನಬಹುದು..ಅಲ್ಲವಾದಲ್ಲಿ ಅದಕ್ಕೆ ಬೇರೆ ಬೇರೆ ಹೆಸರು ಹುಡುಕಬೇಕಾಗುತ್ತದೆ.