Advertisement

ಪಡುಪಣಂಬೂರು ಗ್ರಾ.ಪಂ.: ಶೇ.99ರಷ್ಟು ತೆರಿಗೆ ಸಂಗ್ರಹ

10:48 AM Apr 27, 2022 | Team Udayavani |

ಹಳೆಯಂಗಡಿ: ಗ್ರಾಮದ ಅಭಿವೃದ್ಧಿ ಹಾಗೂ ಯೋಜನೆಗಳ ಪ್ರಗತಿಗೆ ಮೂಲ ಆರ್ಥಿಕ ಸಂಪನ್ಮೂಲವಾಗಿರುವ ಮನೆ ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಸಂಗ್ರಹಿಸುವ ನಿರ್ದಿಷ್ಟ ಗುರಿ ಸಾಧನೆ ಮಾಡಿ ಪಡುಪಣಂಬೂರು ಗ್ರಾ.ಪಂ. ಮಂಗಳೂರು ತಾಲೂಕಿನಲ್ಲಿಯೇ ವಿಶೇಷ ಸಾಧನೆಗೈದು ಪ್ರಥಮ ಸ್ಥಾನ ಪಡೆದುಕೊಂಡಿದೆ.

Advertisement

ಪಡುಪಣಂಬೂರು ಗ್ರಾಮ ಪಂಚಾ ಯತ್‌ನ ಬೆಳ್ಳಾಯರು, 10ನೇ ತೋಕೂರು, ಪಡುಪಣಂಬೂರು ಗ್ರಾಮ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು 2,171 ಮನೆಗಳಿಂದ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದ್ದು ಇದರಲ್ಲಿ ಶೇ. 99 ಭಾಗ ಸಂಗ್ರಹಿಸಿ ಮಂಗಳೂರು ತಾಲೂಕಿನ 37 ಗ್ರಾ.ಪಂ.ನಲ್ಲಿ ಪ್ರಥಮ ಸ್ಥಾನಿಯಾಗಿದೆ. ವಾರ್ಷಿಕ ಬೇಡಿಕೆಯು 18.08 ಲಕ್ಷ ರೂ. ಇದ್ದು ಅದರಲ್ಲಿ 17.83 ಲಕ್ಷ ರೂ. ಸಂಗ್ರಹಿಸಿದೆ. ಎರಡನೇ ಸ್ಥಾನದಲ್ಲಿ ಬಾಳ ಗ್ರಾ.ಪಂ. 27.30 ಲಕ್ಷ ರೂ. ಬೇಡಿಕೆಯಲ್ಲಿ 26.18 ಲಕ್ಷ ರೂ. ಸಂಗ್ರಹಿಸಿ ಶೇ. 96 ಸಾಧನೆ ಮಾಡಿದೆ. ಕುಪ್ಪೆಪದವು ಗ್ರಾ. ಪಂ. 9.79 ಲಕ್ಷ ರೂ.ನಲ್ಲಿ 9.10 ಲಕ್ಷ ರೂ. ಸಂಗ್ರಹಿಸಿದೆ. 10.40 ಲಕ್ಷ ರೂ. ಬೇಡಿಕೆಯಲ್ಲಿ 9.65 ಲಕ್ಷ ರೂ. ಸಂಗ್ರಹಿಸಿದ ಮುಚ್ಚಾರು ಗ್ರಾ.ಪಂ. ಶೇ. 93 ಸಾಧನೆ ಮಾಡಿ ಮೂರನೇ ಸ್ಥಾನವನ್ನು ಹಂಚಿಕೊಂಡಿದೆ.

ಆನ್‌ಲೈನ್‌ ಆಗಲಿದೆ

ಮುಂದಿನ ದಿನದಲ್ಲಿ ತೆರಿಗೆ ಸಂಗ್ರಹವನ್ನು ಪ್ರತೀ ಗ್ರಾ.ಪಂ.ನಲ್ಲಿ ಆನ್‌ಲೈನ್‌ ಮುಖಾಂತರವೇ ಸಂಗ್ರಹಿಸುವ ಯೋಜನೆಯನ್ನು ತಾಲೂಕು ಮಟ್ಟದಲ್ಲಿ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ. ಸಂಗ್ರಹದ ಗುರಿಯನ್ನು ಪ್ರತೀ ಗ್ರಾಮ ಪಂಚಾಯತ್‌ನ ನಿರ್ದಿಷ್ಟ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದಲೇ ತೆರಿಗೆ ಸಂಗ್ರಹಣಗಾರರು, ಸಿಬಂದಿ, ಡಾಟಾ ಎಂಟ್ರಿ ನಿರ್ವಹಿಸುವವರ ಸಹಿತ ಜನಪ್ರತಿನಿಧಿಗಳನ್ನು ಸೇರಿಸಿ ವಿಶೇಷ ಕಾರ್ಯಾಗಾರ ನಡೆಸಿ, ಈ ಬಗ್ಗೆ ಸಂಘಟನತ್ಮಕವಾಗಿ ತೆರಿಗೆ ಸಂಗ್ರಹದ ಜಾಗೃತಿ ನಡೆಸುವ ಚಿಂತನೆ ನಡೆಯುತ್ತಿದೆ.

ಪಡುಪಣಂಬೂರು ಸಾಧನೆ

Advertisement

ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಪಡು ಪಣಂಬೂರು ಗ್ರಾ.ಪಂ.ನ ಆಡಳಿತ ಹಾಗೂ ಅಧಿಕಾರಿ ವರ್ಗಗಳ ಪ್ರಾಮಾಣಿಕ ಪ್ರಯತ್ನದಿಂದ ಗಾಂಧಿ ಗ್ರಾಮ ಪುರಸ್ಕಾರದಂತಹ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕರಾರುವಕ್ಕಾಗಿ ನಡೆಯುವ ಮಾಸಿಕ, ಗ್ರಾಮ, ಮಹಿಳಾ, ಮಕ್ಕಳ, ವಿಶೇಷ, ನರೇಗಾದ ಸಭೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಸೇವಾ ಸಂಸ್ಥೆಗಳನ್ನು ಒಂದುಗೂಡಿಸಿಕೊಂಡು ಗ್ರಾಮದ ಹಲವು ಯೋಜನೆಗಳನ್ನು ಸುಲಭವಾಗಿ ರೂಪಿಸುವ ಪಂಚಾಯತ್‌ ಆಗಿರುವುದರಿಂದ ಅನೇಕ ರಾಜ್ಯ, ರಾಷ್ಟ್ರಮಟ್ಟದ ಗ್ರಾಮದ ತಂಡಗಳು ಭೇಟಿ ನೀಡಿ ಪಂಚಾಯತ್‌ನ ಆಡಳಿತವನ್ನು ಅಭ್ಯಸಿಸಿವೆ.

ಸಮನ್ವಯತೆ ಕಾರಣ

ತಾಲೂಕು ಮಟ್ಟದಲ್ಲಿ ಅನೇಕ ಕಾರ್ಯಾಗಾರ ನಡೆಸಿ ತೆರಿಗೆ ಸಂಗ್ರಹದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿರುವುದ ರಿಂದ ಇಂತಹ ಸಾಧನೆ ಮಾಡಲು ಸಾಧ್ಯ ವಿದೆ. ಗ್ರಾಮಸ್ಥರ ಹಾಗೂ ಗ್ರಾಮದ ಸಮನ್ವಯತೆಯೂ ಇದಕ್ಕೆ ಪರೋಕ್ಷ ಕಾರಣ. ಇದೊಂದು ತಂಡವಾಗಿ ಪ್ರಯತ್ನ ನಡೆಸಿದ್ದಾರೆ. ಮುಂದಿನ ದಿನದಲ್ಲಿ ಆನ್‌ಲೈನ್‌ ತೆರಿಗೆ ಸಂಗ್ರಹದ ಜಾಗೃತಿ ನಡೆಸಲಿದ್ದೇವೆ. -ನಾಗರಾಜ್‌ ಎನ್‌.ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಂಗಳೂರು ತಾ.ಪಂ.

ಪಂಚಾಯತ್‌ಗೆ ಹೆಗ್ಗಳಿಕೆ

ತೆರಿಗೆ ಸಂಗ್ರಹದ ಗುರಿ ಸಾಧನೆ ಯಲ್ಲಿ ನಮ್ಮ ಸಿಬಂದಿ ವಿಶೇಷ ಕಾಳಜಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಪಡುಪಣಂಬೂರು ಗ್ರಾಮ ಪಂಚಾ ಯತ್‌ಗೆ ಹೆಗ್ಗಳಿಕೆಯಾಗಿದೆ. ಇದು ಹೀಗೆಯೇ ಮುಂದುವರಿಯಬೇಕು, ಜನರ ತೆರಿಗೆಯನ್ನು ಸೂಕ್ತವಾಗಿ ಬಳಸಿ ಕೊಂಡಿದ್ದರಿಂದ ಜನರು ನಮ್ಮ ಮೇಲೆ ವಿಶ್ವಾಸ ಇರಿಸಿದ್ದಾರೆ. ಮುಂದೆ ಶೇ.100 ಸಾಧನೆ ಮಾಡಬೇಕೆಂಬ ಛಲ ಇದೆ. -ಮಂಜುಳಾ, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next