Advertisement

ಎಲ್ಲಾ ನೋಟ್‌ ವಾಪ್ಸಿ: ಶೇ.99ರಷ್ಟು ಅಮಾನ್ಯಗೊಂಡ ನೋಟು ವಾಪಸ್‌

06:10 AM Aug 31, 2017 | Team Udayavani |

ಮುಂಬೈ/ನವದೆಹಲಿ: ಅಮಾನ್ಯಗೊಂಡ ಶೇ.99 ರಷ್ಟು ನೋಟುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ವಾಪಸ್‌ ಬಂದಿವೆ!

Advertisement

ಈ ಮಾಹಿತಿಯನ್ನು ಸ್ವತಃ ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗ ಮಾಡಿದೆ. ಕಳೆದ ವರ್ಷದ ನ.8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ , 1000 ಮತ್ತು 500 ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರು. ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆಗೆ ಹೋಗುತ್ತಿರುವ ಹಣ, ಖೋಟಾ ನೋಟು ನಿಯಂತ್ರಣಕ್ಕಾಗಿ ನೋಟು ಅಮಾನ್ಯದ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದರು.

ಆಗಿನ ದಿನಕ್ಕೆ ಭಾರತದಲ್ಲಿ ಚಲಾವಣೆಯಲ್ಲಿದ್ದ 1000 ಮತ್ತು 500 ರೂ.ಗಳ ನೋಟಿನ ಮೌಲ್ಯ 15.44 ಲಕ್ಷ ಕೋಟಿ ರೂ. ಆರ್‌ಬಿಐ ಮಾಹಿತಿ ಪ್ರಕಾರ, ವಾಪಸ್‌ ಬಂದಿರುವ ಹಣ 15.28 ಲಕ್ಷ ಕೋಟಿ ರೂ. ಅಂದರೆ ಕೇವಲ 16,050 ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್‌ ಬಂದಿಲ್ಲ. ಉಳಿದ ಅಷ್ಟೂ ಹಣ ಬ್ಯಾಂಕಿಂಗ್‌ ವ್ಯವಸ್ಥೆಯೊಳಗೆ ಬಂದಿದೆ ಎಂದು ಹೇಳಿದೆ.

ನ.8 ರಂದೇ ನೋಟು ಅಮಾನ್ಯ ಮಾಡಿದ್ದರೂ, ತಮ್ಮಲ್ಲಿರುವ 500 ರೂ. ಮತ್ತು 1000 ರೂ.ಮುಖಬೆಲೆಯ ನೋಟುಗಳನ್ನು ಡಿ. 31ರ ಒಳಗೆ ವಾಪಸ್‌ ಬ್ಯಾಂಕಿಗೆ ಕೊಡಬೇಕು. ಇದಕ್ಕೆ ಬದಲಾಗಿ ಹೊಸದಾಗಿ ಚಲಾವಣೆಗೆ ತರಲಾಗಿದ್ದ 2000 ರೂ. ಮತ್ತು 500 ರೂ.ಗಳ ನೋಟು ಪಡೆಯುವಂತೆ ಸೂಚಿಸಲಾಗಿತ್ತು. ಆ ಸಂದರ್ಭದಲ್ಲಿ ನೋಟುಗಳ ಕೊರತೆಯಾಗಿ ಜನ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಾಗ, ಪ್ರತಿಪಕ್ಷ ನಾಯಕರು ನೋಟು ಅಮಾನ್ಯ ಮಾಡಿದ್ದು ಏಕೆ, ವಾಪಸ್‌ ಎಷ್ಟು ಬಂದಿದೆ ಎಂಬ ಪ್ರಶ್ನೆ ಹಾಕುತ್ತಲೇ ಇದ್ದರು. ಜತೆಗೆ, ಸಂಸತ್‌ನ ಹಣಕಾಸು ಸ್ಥಾಯಿ ಸಮಿತಿ ಕೂಡ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರನ್ನೂ ಪ್ರಶ್ನಿಸಿತ್ತು. ಆದರೆ ಈ ಬಗ್ಗೆ ಮಾಹಿತಿ ಕೊಡದ ಆರ್‌ಬಿಐ ಇನ್ನೂ ಹಳೇ ನೋಟುಗಳ ಎಣಿಕೆ ನಡೆಯುತ್ತಿದೆ ಎಂದಿದ್ದರು.

ಬುಧವಾರ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ನ.8 ರಂದು ಇಡೀ ದೇಶದಲ್ಲಿ ಚಲಾವಣೆಯಲ್ಲಿದ್ದ 1000 ಮತ್ತು 500 ಮುಖಬೆಲೆಯ ನೋಟುಗಳ ಸಂಖ್ಯೆ, ಇದರ ಮೌಲ್ಯ, ವಾಪಸ್‌ ಬಂದ ಹಣ, ಸಿಕ್ಕ ಖೋಟಾನೋಟು, ಬರದ ಹಣದ ಸವಿವರ ಮಾಹಿತಿ ಬಿಡುಗಡೆ ಮಾಡಿದೆ.

Advertisement

ಆರ್‌ಬಿಐ ಪ್ರಕಾರ ನ.8 ರಂದು ದೇಶದಲ್ಲಿ ಚಾಲ್ತಿಯಲ್ಲಿದ್ದ 500 ಮುಖಬೆಲೆಯ ನೋಟುಗಳ ಸಂಖ್ಯೆ 1,716.5 ಕೋಟಿ. ಹಾಗೆಯೇ 1000 ಮುಖಬೆಲೆಯ ನೋಟುಗಳ ಸಂಖ್ಯೆ 685.8 ಕೋಟಿ. ಅಲ್ಲದೆ ನೋಟು ಅಮಾನ್ಯ ಮಾಡಿದ ಮೇಲೆ ಹೊಸ ನೋಟುಗಳ ಮುದ್ರಣಕ್ಕಾಗಿ ಸರ್ಕಾರ 2016-17ರಲ್ಲಿ ವೆಚ್ಚ ಮಾಡಿದ ಹಣ 7,965 ಕೋಟಿ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ದುಪ್ಪಟ್ಟು ಹಣ. ಅಂದರೆ ಹಿಂದಿನ ವರ್ಷ 3,421 ಕೋಟಿ ರೂ.ಗಳನ್ನು ನೋಟು ಮುದ್ರಣಕ್ಕಾಗಿ ಉಪಯೋಗಿಸಲಾಗಿತ್ತು.ಖೋಟಾ ನೋಟು ನಿಯಂತ್ರಣಕ್ಕಾಗಿ ಈ ಕ್ರಮ ಎಂದು ಹೇಳಲಾಗಿದ್ದರೂ, 500 ರೂ. ಮುಖಬೆಲೆಯ ಪ್ರತಿ 10 ಲಕ್ಷ ನೋಟುಗಳಿಗೆ ಕೇವಲ 7.1 ಖೋಟಾನೋಟು ಪತ್ತೆಯಾಗಿವೆ. ಅಂತೆಯೇ 1000 ರೂ. ಮುಖಬೆಲೆಯ ಪ್ರತಿ 10 ಲಕ್ಷ ನೋಟುಗಳಿಗೆ ಕೇವಲ 19.1 ನಕಲಿ ನೋಟು ಪತ್ತೆಯಾಗಿವೆ.

ಪ್ರತಿಪಕ್ಷಗಳಿಂದ “ದಾಳಿ’
ಆರ್‌ಬಿಐ ಈ ಮಾಹಿತಿ ಹೊರಬಿಡುತ್ತಿದ್ದಂತೆ, ಮೊದಲಿಗೆ ಪ್ರತಿಕ್ರಿಯೆ ನೀಡಿದವರು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ. ನೋಟು ಅಮಾನ್ಯಕ್ಕೆ ಶಿಫಾರಸು ಮಾಡಿದ ಆರ್‌ಬಿಐನದ್ದು ನಾಚಿಕೆಗೇಡಿನ ಕೆಲಸ. 16,000 ಕೋಟಿ ರೂ.ಗಳಿಗಾಗಿ 21,000 ಕೋಟಿ ರೂ. ವೆಚ್ಚ ಮಾಡಿ ಹೊಸ ನೋಟು ಮುದ್ರಿಸಲಾಗಿದೆ. ಈ ಹೊಸ ಆರ್ಥಿಕ ತಜ್ಞನಿಗೆ ನೊಬೆಲ್‌ ಬಹುಮಾನ ಕೊಟ್ಟರೂ ಸಾಲದು ಎಂದು ಅವರು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಇದು ಕಪ್ಪುಹಣವನ್ನು ಬಿಳಿಹಣವನ್ನಾಗಿ ಮಾಡುವ ಯೋಜನೆಯಾಗಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೂ ಹಣ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂದಿದೆ ಎಂದರೆ, ದೇಶದಲ್ಲಿ ಇದ್ದ ಕಪ್ಪುಹಣವೆಲ್ಲಾ ಏನಾಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಸಮಾಜವಾದಿ ಪಕ್ಷದ ನರೇಶ್‌ ಅಗರ್ವಾಲ್‌ ಅವರು, ಆರ್‌ಬಿಐ ಗವರ್ನರ್‌ ವಿರುದ್ಧ ನಿಲುವಳಿ ಸೂಚನೆ ಗೊತ್ತುವಳಿ ಮಂಡಿಸುವುದಾಗಿ ಹೇಳಿದ್ದಾರೆ.

ಸಮರ್ಥಿಸಿಕೊಂಡ ಕೇಂದ್ರ
ಕಾಂಗ್ರೆಸ್‌ ಆರೋಪಗಳಿಗೆ ತೀಕ್ಷ್ಣವಾಗಿ ಉತ್ತರ ನೀಡಿದ ಅರುಣ್‌ ಜೇಟಿÉ ಅವರು, ಶೇ.99 ಹಣ ಬಂದಿದ್ದರಲ್ಲಿ ಅಚ್ಚರಿಪಡುವಂಥದ್ದೇನಿಲ್ಲ. ಏಕೆಂದರೆ, ಈ ಹಣಕ್ಕೆ ನಿಜವಾದ ಮಾಲೀಕರು ಸಿಕ್ಕಿದ್ದಾರಲ್ಲ ಎಂದಿದ್ದಾರೆ. ನೋಟು ಅಮಾನ್ಯದ ಪ್ರಮುಖ ಉದ್ದೇಶ ಜನರಲ್ಲಿ ಹಣದ ಹರಿದಾಡುವಿಕೆಯನ್ನು ಕಡಿಮೆಗೊಳಿಸುವುದು, ಡಿಜಿಟಲೈಸೇಶನ್‌ಗೆ ಉತ್ತೇಜನ ನೀಡುವುದು, ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದಾಗಿತ್ತು ಎಂದು ಹೇಳಿದ್ದಾರೆ. ಇದುವರೆಗೆ ಕಪ್ಪುಹಣ ನಿಯಂತ್ರಣಕ್ಕಾಗಿ ಒಂದೇ ಒಂದು ಹೆಜ್ಜೆ ಮುಂದಕ್ಕೆ ಇಡದವರು ಇಂದು ನೋಟು ಅಮಾನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲ ಹಣ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂದಿದೆ ಎಂದರೆ ಅದನ್ನು ಕಾನೂನು ಬದ್ಧ ಎಂದು ಪರಿಗಣಿಸಲು ಸಾಧ್ಯವೇ ಎಂದು ಜೇಟಿÉ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next