Advertisement

ಸುಳ್ಯ ಶಾಸಕರಿಂದ 99 ಲಕ್ಷ ರೂ. ಅನುದಾನ 

05:01 PM Nov 27, 2017 | |

ಆಲಂಕಾರು: ಹಲವು ವರ್ಷಗಳಿಂದ ಭಾರಿ ಬೇಡಿಕೆಯಲ್ಲಿದ್ದ ಮರುವಂತಿಲ-ಪೆರಾಬೆ ರಸ್ತೆ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.

Advertisement

ಸುಳ್ಯ ಶಾಸಕ ಎಸ್‌.ಅಂಗಾರ ಅವರ 99 ಲಕ್ಷ ರೂ. ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಹಾಲಿ ಇದ್ದ ಕಚ್ಚಾ ರಸ್ತೆಯನ್ನು ವಿಸ್ತರಿಸುವ ಮತ್ತು ಮೋರಿ ಅಳವಡಿಸುವ ಕಾರ್ಯ ಮುಗಿದಿದೆ. ಡಾಮರೀಕರಣಕ್ಕೆ ಪೂರ್ವ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ಒಂದು ತಿಂಗಳೊಳಗೆ ಡಾಮರು ಕಾಮಗಾರಿ ಮುಗಿಯಲಿದ್ದು, ಈ ಭಾಗದ ಜನತೆಯ ಭಾರಿ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.

ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿಗೆ, ಪೆರಾಬೆ ಗ್ರಾ.ಪಂ.ನ ರುದ್ರಭೂಮಿ ಸಹಿತ ಗ್ರಾ.ಪಂ.ನಿಂದ ನೀಡಲಾದ ನಿವೇಶನಗಳಿಗೆ ಮತ್ತು ಬೇಳ್ಪಾಡಿ ದರ್ಗಾಕ್ಕೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗಿದ್ದರೆ ಬೇಸಗೆಯಲ್ಲಿ ಧೂಳು ರಸ್ತೆಯಾಗಿ ಸರ್ವಋತು ಸಮಸ್ಯೆಯ ರಸ್ತೆಯಾಗಿ ಮಾರ್ಪಡುತ್ತಿತ್ತು. ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ್ದರು. ವರ್ಷದೊಳಗೆ ಈ ಮನವಿಗೆ ಸ್ಪಂದಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಇದರ ಪರಿಣಾಮ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಈ ರಸ್ತೆಗೆ ಅನುದಾನ ಮೀಸಲಿಟ್ಟು, ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಶಾಸಕರ ಬದ್ಧತೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಕಾಲನಿ ರಸ್ತೆ ಅಭಿವೃದ್ಧಿಗೆ ಆದ್ಯತೆ
ಕುಂತೂರು ಗ್ರಾಮದ ಮಾಪಲ, ಗುರಿಯಡ್ಕ ರಸ್ತೆ ಡಾಮರು ಕಾಮಗಾರಿ ಮತ್ತು ಮಾಪಲ ಹೊಳೆಗೆ ಸೇತುವೆ ನಿರ್ಮಾಣಕ್ಕಾಗಿ 1.64 ಕೋಟಿ ರೂ., ಗುರಿಯಡ್ಕ -ನೇರೋಲ್‌ಪಲ್ಕೆ ರಸ್ತೆ ಡಾಮರು ಕಾಮಗಾರಿಗೆ 1.03 ಕೋಟಿ ರೂ., ಕುಂತೂರು-ಪೆರಾಬೆ ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಈ ವರ್ಷ 2.67 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಕಾಲನಿಗಳ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ. ಶಾಸಕರ ವಿಶೇಷ ಅನುದಾನದಲ್ಲಿ ಪೆರಾಬೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮರುವಂತಿಲ ಪರಿಶಿಷ್ಟ ಜಾತಿ -ಪಂಗಡಗಳ ಕಾಲನಿಗೆ 10 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಹಂತ ಹಂತವಾಗಿ ಅಭಿವೃದ್ಧಿ
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 194 ಪರಿಶಿಷ್ಟ ಜಾತಿ -ಪಂಗಡಗಳ ಕಾಲನಿಗಳ ರಸ್ತೆ ಅಭಿವೃದ್ಧಿ ಕಾರ್ಯಗಳಾಗಬೇಕಿತ್ತು. ಇದರಲ್ಲಿ ಈಗಾಗಲೇ 100 ಕಾಲನಿಗಳ ಕೆಲವು ರಸ್ತೆಗಳಿಗೆ ಡಾಮರು ಮತ್ತು ಕಾಂಕ್ರೀಟ್‌ ಹಾಕುವ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಬಾಕಿಯಿರುವ 94 ಕಾಲನಿಗಳ ರಸ್ತೆ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಿ ಮುಗಿಸಲಾಗುವುದು.
ಎಸ್‌. ಅಂಗಾರ,
ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ

Advertisement

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next