Advertisement

980 ಅಡಿ ಕೊರೆದರೂ ಸಿಗದ ಜೀವಜಲ!

10:42 AM May 18, 2019 | Team Udayavani |

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರ ಪ್ರದೇಶದಲ್ಲಿ ಬಹುಭಾಗ ಮುಳುಗಡೆಯಾಗಿ ‘ಮುಳುಗಡೆ ಜಿಲ್ಲೆ’ ಎಂದೇ ಕರೆಸಿಕೊಳ್ಳುವ ಬಾಗಲಕೋಟೆಯಲ್ಲಿ ನೀರಿಗೆ ತೀವ್ರ ಬರ ಎದುರಾಗಿದೆ. ಮೂರು ನದಿಗಳು, 236 ಕೆರೆಗಳು, ಹತ್ತಾರು ಹಳ್ಳ-ಕೊಳ್ಳಗಳಿದ್ದರೂ ಇಲ್ಲಿ ನೀರಿನ ಸಮಸ್ಯೆ ಇದೆ ಎಂದರೆ ನಂಬಲೇಬೇಕು!

Advertisement

ವರ್ಷದ 8 ತಿಂಗಳು ಹಿನ್ನೀರು ಜಿಲ್ಲೆಯ ಬಹುಭಾಗ ಭೌಗೋಳಿಕ ಕ್ಷೇತ್ರದಲ್ಲಿ ಹರಡಿಕೊಂಡರೂ ಅಂತರ್ಜಲ ವೃದ್ಧಿಯಾಗುತ್ತಿಲ್ಲ. ಇದಕ್ಕೆ ಜಿಲ್ಲೆಯ ಭೂಮಿಯಲ್ಲಿ ರಾಕ್‌ಸ್ಟೋನ್‌ (ಬಂಡೆಗಲ್ಲು) ಇವೆ ಎಂಬ ವರದಿ ಒಂದೆಡೆ ಇದ್ದರೆ, ಕೆಲವು ಪ್ರದೇಶದಲ್ಲಿ ಲೈಮ್‌ಸ್ಟೋನ್‌ (ಸುಣ್ಣದ ಕಲ್ಲು) ಒಳಗೊಂಡ ಭೂಮಿ ಜಿಲ್ಲೆಯಲ್ಲಿದೆ. ಇದು ಜಿಲ್ಲೆಯ ಭೂಮಿಯ ನೈಸರ್ಗಿಕ ಪರಿಸರವಾದರೆ, ಇರುವ ನೀರನ್ನೇ ಸದ್ಬಳಕೆ ಮಾಡಿಕೊಳ್ಳುವತ್ತ ಮುಂದಾಲೋಚನೆ ಇಲ್ಲದ ಆಡಳಿತವೂ ಇಲ್ಲಿದೆ ಎನ್ನುತ್ತಾರೆ ತಜ್ಞರು. ಸದ್ಯ ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಕೊಳವೆ ಬಾವಿ ಕೊರೆಸುವ ಪ್ರಕ್ರಿಯೆ ನಡೆಯುತ್ತಿದ್ದು, 10 ವರ್ಷಗಳ ಹಿಂದೆ ಕೇವಲ 180ರಿಂದ 230 ಅಡಿಗೆ ಸಿಗುತ್ತಿದ್ದ ನೀರು, ಈಗ 980 ಅಡಿ ಕೊರೆದರೂ ಸರಿಯಾಗಿ ಸಿಗುತ್ತಿಲ್ಲ.

ಅಂತರ್ಜಲ ಅಪಾಯ ಮಟ್ಟಕ್ಕೆ ಕುಸಿದ ತಾಲೂಕು ಪಟ್ಟಿಯಲ್ಲಿ ಬಾದಾಮಿ, ಬಾಗಲಕೋಟೆ ಹಾಗೂ ಹುನಗುಂದ ಸೇರಿಕೊಂಡಿವೆ. ಬಾದಾಮಿ ತಾಲೂಕು ವ್ಯಾಪ್ತಿಯ ಕೆರೂರ ಪಟ್ಟಣ ಹತ್ತಿರದ ಬೆಳಗಂಟಿ ಏರಿಯಾದಲ್ಲಿ ಕಳೆದ ವಾರ ನಗರಾಭಿವೃದ್ಧಿ ಕೋಶದಿಂದ 980 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಇದೇ ಕೆರೂರಿನಲ್ಲಿ ನಾಲ್ಕು ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ ಮೂರು ವಿಫಲವಾಗಿವೆ. ಕೊರೆಸಿದ ಕೊಳವೆ ಬಾವಿಗಳೆಲ್ಲ 630ರಿಂದ 980 ಅಡಿವರೆಗೆ ಎಂಬುದು ಗಮನಾರ್ಹ.

76 ಕೊಳವೆ ಬಾವಿ ವಿಫಲ: ಬರದ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 34 ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ ನಾಲ್ಕು ವಿಫಲವಾಗಿವೆ. ಈ ನಾಲ್ಕೂ ಕೊಳವೆ ಬಾವಿಗಳನ್ನು 680ರಿಂದ 980 ಅಡಿವರೆಗೆ ಕೊರೆಸಲಾಗಿತ್ತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಟಿಟಿಎಫ್‌ (ತಾಲೂಕು ಟಾಸ್ಕ್ಫೋರ್ಸ್‌ ಸಮಿತಿ)ಯಿಂದ ಆರು ತಾಲೂಕಿನಲ್ಲಿ ಜ.15ರಿಂದ ಇಲ್ಲಿಯವರೆಗೆ ಒಟ್ಟು 305 ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ 233 ಕೊಳವೆ ಬಾವಿ ಮಾತ್ರ ಸಫಲವಾಗಿವೆ. ಬರೋಬ್ಬರಿ 76 ಕೊಳವೆ ಬಾವಿಯಲ್ಲಿ ಹನಿ ನೀರು ದೊರೆತಿಲ್ಲ. ವಿಫಲವಾದ ಕೊಳವೆ ಬಾವಿಗಳೆಲ್ಲ ಅತಿಯಾದ ಆಳಕ್ಕೆ ಹಾಕಿದರೂ ನೀರು ಸಿಗದೇ ಇರುವುದು, ಅಂತರ್ಜಲ ಅಪಾಯಕ್ಕಿಳಿದಿದೆ ಎಂಬುದರ ಮುನ್ಸೂಚನೆ ಎಂದು ತಜ್ಞರು ಹೇಳುತ್ತಾರೆ.

ಮತ್ತೆ 97ಕ್ಕೆ ಯೋಜನೆ: ಟಿಟಿಎಫ್‌-1 ಮತ್ತು ಟಿಟಿಎಫ್‌-2ರಲ್ಲಿ ಈಗಾಗಲೇ 305 ಕೊಳವೆ ಬಾವಿ ಕೊರೆಸಿದ್ದು, ಟಿಟಿಎಫ್‌-3ರ ಮತ್ತೆ 97 ಹೊಸ ಕೊಳವೆ ಬಾವಿ ಕೊರೆಸಲು ಯೋಜನೆ ಸಿದ್ಧಪಡಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. ಕೊಳವೆ ಬಾವಿ ಕೊರೆಸುವುದರಿಂದ ಅಂತರ್ಜಲ ಪಾತಾಳಕ್ಕೆ ಇಳಿಯುತ್ತದೆ ಎಂದು ಸರ್ಕಾರವೇ ಹೇಳಿದರೂ ಜಿಲ್ಲೆಯಲ್ಲಿ ಅತಿಯಾದ ಕೊಳವೆ ಬಾವಿ ಕೊರೆಸುತ್ತಿರುವುದಕ್ಕೆ ಕೆಲವರು ಅಸಮಾಧಾನವೂ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆಸುವುದು ಒಂದೇ ಅಂತಿಮ ಪರ್ಯಾವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Advertisement

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next