Advertisement

ವರವಾದ ಕೋವಿಡ್ -ಮುಂಗಾರು: ಶೇ.97ರಷ್ಟು ಭತ್ತ ಕೃಷಿ

09:13 PM Sep 07, 2020 | mahesh |

ಕುಂದಾಪುರ: ಕೋವಿಡ್ , ಲಾಕ್‌ಡೌನ್‌ ಬೇರೆ ಎಲ್ಲ ಉದ್ಯಮಗಳಿಗೆ ಸಂಕಷ್ಟ ತಂದಿತ್ತರೆ, ಕೃಷಿಗೆ ಅದರಲ್ಲೂ ಭತ್ತದ ಕೃಷಿಗೆ ಮಾತ್ರ ವರವಾಗಿ ಪರಿಣಮಿಸಿದೆ. ಇದಕ್ಕೆ ಮುಂಗಾರು ಮಳೆಯು ಉತ್ತಮ ರೀತಿಯ ಸಹಕಾರ ನೀಡಿದೆ. ಹಾಗಾಗಿ ಈ ಬಾರಿ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ
ಶೇ. 97.75ರಷ್ಟು ಭತ್ತದ ಬೇಸಾಯ ಆಗಿದೆ. ಬೆಂಗಳೂರು, ಮುಂಬಯಿ ಮತ್ತಿತರ ಕಡೆಗಳಿಂದ ಊರಿಗೆ ಬಂದಿರುವ ಜನ ಮಾತ್ರವಲ್ಲದೆ ಊರಲ್ಲೇ ಇದ್ದ ಅನೇಕ ಮಂದಿ ಈ ಬಾರಿ ಕೃಷಿಯತ್ತ ಒಲವು ತೋರಿದ್ದರಿಂದ ಈ ಬಾರಿ ನಿರೀಕ್ಷೆಗೂ ಮೀರಿದ ಗುರಿ ಸಾಧನೆಯಾಗಿದೆ.

Advertisement

ವಲಯವಾರು ಎಷ್ಟೆಷ್ಟು?
ಕುಂದಾಪುರ ಹೋಬಳಿಯಲ್ಲಿ 4,670 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಗುರಿಯಾಗಿದ್ದು, 4,670 ಹೆ. ಪ್ರದೇಶದಲ್ಲಿ ಸಾಧಿಸಲಾಗಿದೆ. ವಂಡ್ಸೆಯಲ್ಲಿ 4,570 ಹೆ. ಪ್ರದೇಶದಲ್ಲಿ ಗುರಿಯಿದ್ದು, 4,255 ಹೆ. ಪ್ರದೇಶದಲ್ಲಿ ಬೆಳೆಯಲಾಗಿದೆ. ಹೆಬ್ರಿಯಲ್ಲಿ 350 ಹೆ. ಪ್ರದೇಶದಲ್ಲಿ ಗುರಿಯಿದ್ದು, 350 ಹೆ. ಗುರಿ ಸಾಧಿಸಲಾಗಿದೆ. ಬೈಂದೂರಲ್ಲಿ 4,410 ಹೆ. ಪ್ರದೇಶದಲ್ಲಿ ಗುರಿಯಿದ್ದು, 4,410 ಸಾಧಿಸಲಾಗಿದೆ. ಬೈಂದೂರು, ಕುಂದಾಪುರ, ಹೆಬ್ರಿಯಲ್ಲಿ ಶೇ.100 ರಷ್ಟು ಗುರಿ ಸಾಧನೆಯಾಗಿದೆ.

ಹಡಿಲು ಗದ್ದೆಯಲ್ಲೂ ಬೇಸಾಯ
ಈ ಬಾರಿಯ ಮುಂಗಾರು ಹಂಗಾಮಿನ ವಿಶೇಷತೆಯೆಂದರೆ ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ಹಡಿಲು ಬಿಟ್ಟಿದ್ದ ಗದ್ದೆಗಳಲ್ಲಿ ಭತ್ತದ ಬೇಸಾಯ ಮಾಡಲಾಗಿದೆ. ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ನೇತೃತ್ವದಲ್ಲಿಯೇ ಕುಂದಾಪುರದ ಬೆಳ್ವೆ, ಅಮಾಸೆಬೈಲು, ಹಾಲಾಡಿ ಸೇರಿದಂತೆ ಹಲವೆಡೆಗಳಲ್ಲಿ 280ಕ್ಕೂ ಹೆಚ್ಚು ಎಕರೆ ಹಡಿಲು ಪ್ರದೇಶಗಳಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯಿಂದ 700ಕ್ಕೂ ಹೆಚ್ಚು ಎಕರೆ ಪ್ರದೇಶಗಳ ಹಡಿಲು ಗದ್ದೆಗಳಲ್ಲಿ ಭತ್ತದ ಬೇಸಾಯ ಮಾಡುವ ಮೂಲಕ ಮರು ಜೀವ ನೀಡಲಾಗಿದೆ. ಇದಲ್ಲದೆ ಕೋಡಿ, ಪಡುಕೋಣೆ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಂಘ- ಸಂಸ್ಥೆಗಳ ಮುಖಾಂತರ ಹಡಿಲು ಗದ್ದೆಗಳನ್ನು ಬೇಸಾಯ ಮಾಡಲಾಗಿದೆ.

ಉತ್ತಮ ಸಾಧನೆ
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಭತ್ತದ ಕೃಷಿಯಲ್ಲಿ ಉತ್ತಮ ಸಾಧನೆ ಮೂಡಿ ಬಂದಿದೆ. ಕೊರೊನಾ, ಲಾಕ್‌ಡೌನ್‌ ಕೂಡ ಇದಕ್ಕೆ ಕಾರಣವಾಗಿರಬಹುದು. ಮಳೆಯು ಉತ್ತಮ ವಾಗಿದ್ದು, ಅದು ಕೂಡ ಒಂದು ರೀತಿಯಲ್ಲಿ ಕಾರಣ ಆಗಿರಬಹುದು. ಉತ್ತಮ ಫಸಲಿನ ನಿರೀಕ್ಷೆಯಿದೆ.
-ರೂಪಾ ಮಾಡಾ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕುಂದಾಪುರ

ಉತ್ತಮ ಫಸಲು ನಿರೀಕ್ಷೆ
ನಮ್ಮ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ಪೇಪರ್‌ ಲೋಟದಲ್ಲಿ ಬಿತ್ತನೆ ಮಾಡಿ, ಅದನ್ನು ಗದ್ದೆಯಲ್ಲಿ ನಾಟಿ ಮಾಡಲಾಗಿದೆ. ಈಗ ಒಂದೊಂದು ಬುಡದಲ್ಲಿ 50ಕ್ಕೂ ಹೆಚ್ಚು ಸಸಿಗಳು ಕವಲೊಡೆದಿವೆ. ಮನೆಯವರೆಲ್ಲ ಸೇರಿ ಈ ಕಾರ್ಯವನ್ನು ಮಾಡಿದ್ದೆವು. ಉತ್ತಮ ಫಸಲಿನ ನಿರೀಕ್ಷೆಯಿದೆ.
– ವಿಶ್ವನಾಥ್‌ ಗಾಣಿಗ,  ಕಟ್‌ಬೆಲ್ತೂರು, ಕೃಷಿಕ

Advertisement

 

Advertisement

Udayavani is now on Telegram. Click here to join our channel and stay updated with the latest news.

Next