Advertisement

953.96 ಕೋಟಿ ರೂ. ಬಜೆಟ್‌ಗೆ ಅನುಮೋದನೆ

11:24 AM Jun 19, 2019 | Team Udayavani |

ಕಾರವಾರ: ಜಿಪಂ 2019-20 ನೇ ಸಾಲಿನ 95396.26 ಲಕ್ಷ ರೂ.ಗಳ ಮುಂಗಡ ಪತ್ರಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯಿತು.

Advertisement

ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಮುಂಗಡ ಪತ್ರವನ್ನು ಮಂಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ 2019-20ನೇ ಸಾಲಿನ ಕರಡು ಯೋಜನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿತ್ತು. ಬಜೆಟ್‌ನಲ್ಲಿ ಕೇಳಲಾದ ಅನುದಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಉಕ ಜಿಪಂ ಲೆಕ್ಕ ಶೀರ್ಷಿಕೆಯಡಿ ರೂ.95396.26 ಲಕ್ಷಗಳನ್ನು ಒದಗಿಸಿದೆ ಎಂದು ತಿಳಿಸಿದರು.

ಒಟ್ಟು ಮುಂಗಡ ಪತ್ರದಲ್ಲಿ ಜಿಪಂ ಕಾರ್ಯಕ್ರಮಗಳಿಗೆ ರೂ.29774.48 ಲಕ್ಷ, ತಾಪಂ ಕಾರ್ಯಕ್ರಮಗಳಿಗೆ ರೂ.65555.78 ಲಕ್ಷ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ ರೂ.66 ಲಕ್ಷ ಅನುದಾನ ಒದಗಿಸಲಾಗಿದೆ. ಆದರೆ 2019-20ನೇ ಸಾಲಿನಲ್ಲಿ ಯೋಜನೆ-ಯೋಜನೇತರ ಲೆಕ್ಕ ಶೀರ್ಷಿಕೆಯಡಿ ಪ್ರತ್ಯೇಕವಾಗಿ ಅನುದಾನ ಒದಗಿಸಿಲ್ಲ. ಅಲ್ಲದೆ ಜಿಪಂ ಅಧಿಧೀನ ಅಧಿಕಾರಿಗಳ ಮತ್ತು ನೌಕರರ ವೇತನಾಂಶ ಹಾಗೂ ವಿವಿಧ ಇಲಾಖೆಗಳಿಗೆ ಒದಗಿಸಿರುವ ಅನುದಾನವನ್ನು ವಿವರಿಸಿದರು.

ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವ ಸಂಬಂಧ ಸದ್ಯದಲ್ಲೇ ಕಡತ ವಿಲೇವಾರಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ಎಂ.ರೋಷನ್‌ ತಿಳಿಸಿದರು.

ಸಭೆಯಲ್ಲಿ ವಿವಿಧ ಸದಸ್ಯರು, ಕೆಲವು ಇಲಾಖೆಗಳಲ್ಲಿ ಚುನಾವಣೆ ಮತ್ತಿತರ ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅವರು, ಕಡತಗಳ ವಿಲೇವಾರಿ ಮಾಡುವ ಸಲುವಾಗಿಯೇ ಸದ್ಯದಲ್ಲಿ ವಿಶೇಷವಾಗಿ ಕಡತ ವಿಲೇವಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಿರ್ದಿಷ್ಟ ಕಾಲಮಿತಿಯಲ್ಲಿ ಎಲ್ಲ ಕಡತಗಳನ್ನು ಮುಗಿಸಲಾಗುವುದು ಎಂದರು.

Advertisement

ತಾಲೂಕು ಮಟ್ಟದಲ್ಲಿಯೂ ಕಡತ ವಿಲೇವಾರಿ ವಾರ ಹಮ್ಮಿಕೊಳ್ಳಲಾಗುವುದು. ಜಿಪಂ ವ್ಯಾಪ್ತಿಯಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆ ಇರುವುದರಿಂದಲೂ ವಿಳಂಬಕ್ಕೆ ಕಾರಣವಾಗಿದೆ. ಡಾಟಾ ಎಂಟ್ರಿ ಆಪರೇಟರ್‌ಗಳ ಹೊರಗುತ್ತಿಗೆ ಸಿಬ್ಬಂದಿ ಪಡೆದು ಬಾಕಿ ಕಡತಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಯೋಜನೆಯ ತುಂಡುಗುತ್ತಿಗೆಗೆ ಇನ್ನು ಮುಂದೆ ಅವಕಾಶ ನೀಡುವು ದಿಲ್ಲ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಳವೆಬಾವಿ ಕೊರೆಯುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸಿಯೇ ಪಾರದರ್ಶಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಈಗಾಗಲೇ ಗ್ರಾಮೀಣ ನೀರು ಸರಬರಾಜು ಇಲಾಖೆ ಆಯುಕ್ತರ ಅನುಮತಿಯನ್ನೂ ಪಡೆಯಲಾಗಿದ್ದು ಇನ್ನು ಮುಂದೆ ಜಿಲ್ಲೆಯಲ್ಲಿ ತುಂಡು ಗುತ್ತಿಗೆ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕೆಂದು ಆಗ್ರಹಿಸಿ ಈಗಾಗಲೇ ಜಿಲ್ಲೆಯಲ್ಲಿ ನಡೆದಿರುವ ಸಾಮಾಜಿಕ ಜಾಲತಾಣ ನಡೆದಿರುವ ಅಭಿಯಾನಕ್ಕೆ ಪೂರಕವಾಗಿ ಜಿಪಂದಿಂದಲೂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಪಂ ಉಪಾಧ್ಯಕ್ಷ ಸಂತೋಷ್‌ ರೇಣಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ್‌ ಮಹಾದೇವ ನಾಯ್ಕ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜಯ ಮಾರುತಿ ಹಣಬರ, ಸಾಮಾಜಿಕ ಸ್ಥಾಯಿ ಅಧ್ಯಕ್ಷೆ ಜಯಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next