ಚಿತ್ರದುರ್ಗ: ಶತಮಾನ ಪೂರೈಸಲು ಇನ್ನು ಆರು ವರ್ಷ ಮಾತ್ರ ಬಾಕಿ. ಬರೋಬ್ಬರಿ 94 ವರ್ಷವಾಗಿದ್ದರೂ ಎತ್ತಲಿಂದ ನೋಡಿದರೂ ಸಣ್ಣ ಬಿರುಕೂ ಕಾಣದಷ್ಟು ಸುಸಜ್ಜಿತ ಗಟ್ಟಿಮುಟ್ಟಾಗಿರುವ ಕಟ್ಟಡ. ಇದು ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜೇಂದ್ರ ಗ್ರಂಥಾಲಯ.
1925ರಲ್ಲಿ ನಿರ್ಮಾಣವಾದ ಬ್ರಿಟಿಷರ ಕಾಲದ ಕಟ್ಟಡವಿದು. ಮೈಸೂರು ಅರಸರ ದೂರದೃಷ್ಟಿಯ ಫಲವಾಗಿ 1925ರಲ್ಲಿ ವಾಚನಾಲಯವಾಗಿ ನೆಲೆ ನಿಂತಿದೆ. ಇಷ್ಟು ವರ್ಷಗಳ ಸುದಿಧೀರ್ಘ ಪಯಣದಲ್ಲಿ ಇಲ್ಲಿ ಬಂದು ಜ್ಞಾನಿಗಳಾದವರ ಸಂಖ್ಯೆ ಅಗಣಿತ. ಸತತ ಮೂರರಿಂದ ನಾಲ್ಕು ದಶಕಗಳಿಂದ ಈ ಗ್ರಂಥಾಲಯಕ್ಕೆ ನಿತ್ಯವೂ ಬಂದು ಹೋಗುವವರ ತಂಡವೇ ಇದೆ. ಇಲ್ಲಿಗೆ ಬಂದು ಹೋಗದಿದ್ದರೆ ಆ ದಿನ ಮುಗಿಯುವುದೇ ಇಲ್ಲ ಎನ್ನುವ ಚಡಪಡಿಕೆ. ರಾಜ ಗಾಂಭೀರ್ಯದಿಂದ ಕಾಣುವ ಜಿಲ್ಲಾ ಕೇಂದ್ರ ಗ್ರಂಥಾಲಯ ಚಿತ್ರದುರ್ಗದ ಪಾಲಿಗೆ ಹೆಮ್ಮೆಯ ತಾಣ.
ಜಿಲ್ಲಾ ಕೇಂದ್ರ ಗ್ರಂಥಾಲಯವಾಗಿ ಅರ್ಧ ಶತಮಾನ: ಮೈಸೂರು ಅರಸರು ಈ ಗ್ರಂಥಾಲಯ ನಿರ್ಮಾಣ ಮಾಡಿದ ಹೊತ್ತಿಗೆ ಇದನ್ನು ವಾಚನಾಲಯ ಎನ್ನಲಾಗುತ್ತಿತ್ತು. 1925 ರಿಂದ 1969 ರವರೆಗೆ ವಾಚನಾಲಯವಾಗಿತ್ತು. ಅಲ್ಲಿಂದೀಚೆಗೆ ಅಂದರೆ ಸರಿಯಾಗಿ 50 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಇದನ್ನು ಜಿಲ್ಲಾ ಕೇಂದ್ರ ಗ್ರಂಥಾಲಯವನ್ನಾಗಿ ಮಾರ್ಪಾಟು ಮಾಡಿತು. ಹಾಗಾಗಿ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿ 94 ವರ್ಷವಾದರೆ, ಸರ್ಕಾರಿ ಗ್ರಂಥಾಲಯವಾಗಿ ಬರೋಬ್ಬರಿ ಅರ್ಧ ಶತಮಾನವಾಗಿದೆ. ಇಡೀ ಕಟ್ಟಡ ಇಂದಿಗೂ ಶಿಥಿಲವಾಗದೆ ಕಟ್ಟುಮಸ್ತಾಗಿದೆ. ಕಟ್ಟಡದ ಕಾರಣಕ್ಕೆ ಗ್ರಂಥಾಲಯವೂ ಸುಂದರವಾಗಿದೆ. ವಿದ್ಯಾರ್ಥಿಗಳಿಗಂತೂ ಇದು ಸಾಕ್ಷಾತ್ ಸರಸ್ವತಿಯ ದೇಗುಲ.
60 ಸಾವಿರಕ್ಕೂ ಅಧಿಕ ಪುಸ್ತಕ: 2007 ರಿಂದ ನಗರ ಕೇಂದ್ರ ಗ್ರಂಥಾಲಯ ಕೂಡ ಆಗಿದೆ. ಇಲ್ಲಿ ಬರೋಬ್ಬರಿ 60 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಸ್ಪರ್ಧಾತ್ಮಕ ಪುಸ್ತಕಗಳ ವಿಭಾಗ, ಮಕ್ಕಳ ಪುಸ್ತಕ ವಿಭಾಗ, ಪತ್ರಿಕಾ ವಿಭಾಗ, ಕಂಪ್ಯೂಟರ್ ವಿಭಾಗ ಹೀಗೆ ನಾಲ್ಕಾರು ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಪುಸ್ತಕಗಳನ್ನು ಜೋಡಿಸಲಾಗಿದೆ. ಸ್ಪರ್ಧಾತ್ಮಕ ವಿಭಾಗದಲ್ಲಿ 4500, ಮಕ್ಕಳ ಗ್ರಂಥಾಲಯದಲ್ಲಿ 6 ಸಾವಿರ ಪುಸ್ತಕಗಳಿದ್ದು ವಾಚನಾಸಕ್ತರಿಗೆ ಜ್ಞಾನ ನೀಡುತ್ತಿವೆ.
-ತಿಪ್ಪೇಸ್ವಾಮಿ ನಾಕೀಕೆರೆ