ಸುಳ್ಯ: ತಾಲೂಕಿನಲ್ಲಿ 94ಸಿ, 94ಸಿಸಿ ಹಕ್ಕುಪತ್ರಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಪೈಕಿ 5,082 ಅರ್ಜಿಗಳು ಪುರಸ್ಕೃತಗೊಂಡಿದೆ. 4,703 ಅರ್ಜಿಗಳು ತಿರಸ್ಕೃತಗೊಂಡಿವೆ. ಪುರಸ್ಕಾರದಷ್ಟೇ ತಿರಸ್ಕಾರದ ಸಂಖ್ಯೆಯೂ ಇರುವುದರಿಂದ ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆ ನಡೆಸುವಂತೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಸೂಚನೆ ನೀಡಿದ್ದಾರೆ.
ಶಾಸಕ ಅಂಗಾರ, ಒಂದೇ ಸ.ನಂ.ನಲ್ಲಿ ಕೆಲವರಿಗೆ ಮಂಜೂರಾತಿಯಾಗಿದ್ದು, ಇನ್ನು ಕೆಲವರಿಗೆ ಬಾಕಿ ಇದೆ ಎಂಬ ಮಾಹಿತಿ ನೀಡಿದಾಗ ಅದನ್ನು ಪರಿಶೀಲಿಸುವಂತೆ ತಿಳಿಸಿದರು. ತಾಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಂಸದೀಯ ಕಾರ್ಯದರ್ಶಿ ಗಮನ ಸೆಳೆದರು.
ಘನ ತ್ಯಾಜ್ಯ ವಿಲೇವಾರಿಗೆ ಸ್ಥಳ ಮಂಜೂರಾತಿ, ಪೋಡಿ ಮುಕ್ತ ಗ್ರಾಮ, ದಫನಭೂಮಿ ಮೊದಲಾದ ಸಮಸ್ಯೆಗಳ ಬಗ್ಗೆ ಮಾತನಾಡಿದ ಐವನ್, ಪೆರುವಾಜೆ ಗ್ರಾಮದಲ್ಲಿ ಶ್ಮಶಾನಕ್ಕೆ ಸ್ಥಳ ಕಾದಿರಿಸುವಂತೆ ಆದೇಶಿಸಿದರು.
ಪರಭಾರೆಯ ಅವಧಿ ಮುಗಿದ ಕೃಷಿ ಭೂಮಿಗೆ ನಿರಾಕ್ಷೇಪಣ ಪತ್ರ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಸಹಾಯಕ ಆಯುಕ್ತರಿಗೆ ನೀಡುವಂತೆ ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫ ಅವರು ಮನವಿ ಸಲ್ಲಿಸಿದರು.
ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಗ್ರಾಮದ ಗೂನಡ್ಕದ ಬೈಲ ರಸ್ತೆಯ ಸಮೀಪ ಗುಳಿಗಪಾರೆ ಎಂಬಲ್ಲಿ ಮತ್ತು ಕಡೆಪಾಲದ ಕೊಚ್ಚಿ ಎಂಬಲ್ಲಿ 35 ವರ್ಷಗಳಿಂದ ವಾಸಿಸುತ್ತಿರುವ 25 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ಸುಳ್ಯ ತಾಲೂಕು ತಹಶೀಲ್ದಾರ್ ಕುಂಞ ಅಹಮ್ಮದ್ ಮತ್ತು ಇಲಾಖೆಯ ವಿವಿಧ ಮುಖ್ಯಸ್ಥರುಗಳು ಭಾಗವಹಿಸಿದ್ದರು.