Advertisement

92 ಒಎಂಆರ್‌ ಶೀಟ್‌ಗಳಲ್ಲಿ ವ್ಯತ್ಯಾಸ

01:19 AM May 11, 2022 | Team Udayavani |

ಬೆಂಗಳೂರು: ಪಿಎಸ್‌ಐ ಪರೀಕ್ಷೆ ಅಕ್ರಮದ ಆರೋಪದಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದ್ದ 92 ಒಎಂಆರ್‌ ಶೀಟ್‌ನಲ್ಲಿ ವ್ಯತ್ಯಾಸವಾಗಿದೆ ಎಂದು ತಿಳಿದುಬಂದಿದೆ.

Advertisement

ಪರೀಕ್ಷಾ ಕೇಂದ್ರಗಳಲ್ಲಿ ನೀಡಿದ್ದ ಒಎಂಆರ್‌ ಶೀಟ್‌ ಅನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿರುವ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಕಾರ್ಬನ್‌ ಪ್ರತಿ ಹಾಗೂ ಅಸಲಿ ಪ್ರತಿಯಲ್ಲಿ ತಿದ್ದಿರುವುದನ್ನು ಪತ್ತೆ ಹಚ್ಚಿದ್ದಾರೆ. ಜತೆಗೆ ಒಟ್ಟು ಅಂಕಗಳಲ್ಲೂ ವ್ಯತ್ಯಾಸವಾಗಿರುವುದು ಒಎಂಆರ್‌ ಶೀಟ್‌ನ ಪರಿಶೀಲನೆ ತಿಳಿದುಬಂದಿದೆ.

ತಿದ್ದಿರುವುದು ಬಯಲು
ಪರೀಕ್ಷಾರ್ಥಿಗಳು ಅಸಲಿ ಒಎಂಆರ್‌ನಲ್ಲಿ ತಿದ್ದಿರುವ ಪೆನ್ನಿಗೂ ಕಾರ್ಬನ್‌ ಪ್ರತಿಯಲ್ಲಿ ತಿದ್ದಿರುವ ಪೆನ್ನಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಅಸಲಿ ಪತ್ರಿಕೆಯಲ್ಲಿ ಒಂದು ಪೆನ್‌ ಬಳಸಿದ್ದರೆ, ಕಾರ್ಬನ್‌ ಪ್ರತಿಯಲ್ಲಿ ಮತ್ತೂಂದು ಪೆನ್‌ನಲ್ಲಿ ತಿದ್ದಿರುವುದು ಪತ್ತೆಯಾಗಿದೆ. ಅಲ್ಲದೆ, ಪೆನ್‌ ಇಂಕ್‌ ಕಲರ್‌ನಲ್ಲೂ ಭಾರಿ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಕಪ್ಪು ಹಾಗೂ ನೀಲಿ ಇಂಕ್‌ ಪೆನ್‌ಗಳನ್ನು ಒಎಂಆರ್‌ ಪ್ರತಿ ತುಂಬಲು ಬಳಸಲಾಗಿದೆ. ಒಂದೇ ಒಎಂಆರ್‌ನಲ್ಲಿ ಮೂರು ರೀತಿ ನೀಲಿ ಬಣ್ಣದ ಪೆನ್‌ ಬಳಕೆಯಾಗಿರುವುದು ಪತ್ತೆಯಾಗಿದೆ. 8 ಪೇಪರ್‌ಗಳಲ್ಲಿ 4 ಕಲರ್‌ ಪೆನ್‌ ಬಳಸಿರುವುದು ಪತ್ತೆಯಾಗಿದೆ. ಇನ್ನು 6 ಪೇಪರ್‌ಗಳಲ್ಲಿ ಮೂರು ಕಲರ್‌ ಇಂಕ್‌ ಇರುವ ಪೆನ್‌ ಬಳಸಲಾಗಿದೆ ಎಂಬುದು ಪತ್ತೆಯಾಗಿದೆ.

8 ಮಂದಿ ಫಿಂಗರ್‌ ಪ್ರಿಂಟ್‌
ಪರೀಕ್ಷಾ ಕೇಂದ್ರಗಳಲ್ಲಿ ಕೋಠಡಿ ಮೇಲಿcಚಾರಕರು ಹಾಗೂ ಪರೀಕ್ಷೆ ಬರೆಯುವ ಅಭ್ಯರ್ಥಿ ಮತ್ತು ಮೌಲ್ಯಮಾಪನ ಮಾಡುವವರು ಮಾತ್ರ ಉತ್ತರ ಪತ್ರಿಕೆಗಳನ್ನು ಮುಟ್ಟಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಎಂಆರ್‌ ಶೀಟ್‌ನ ಕೆಲವು ಪ್ರತಿಗಳಲ್ಲಿ 8 ಜನರ ಫಿಂಗರ್‌ ಪ್ರಿಂಟ್‌ ಪತ್ತೆಯಾಗಿದೆ. ಕೆಲವು ಪ್ರತಿಗಳಲ್ಲಿ ಅದಕ್ಕಿಂತಲೂ ಹೆಚ್ಚು ಮಂದಿ ಮುಟ್ಟಿರುವುದು ಪತ್ತೆಯಾಗಿದೆ.

ಸಮಯದಲ್ಲಿ ವ್ಯತ್ಯಾಸ
ಪರೀಕ್ಷಾ ಕೇಂದ್ರಗಳಲ್ಲಿ ಓಎಂಆರ್‌ ಶೀಟ್‌ನಲ್ಲಿ ಅಭ್ಯರ್ಥಿಗಳು ಉತ್ತರ ತುಂಬಿದಾಗ ಕೇಲವು ನಿಮಿಷಗಳು ಅಥವಾ ಒಂದೆರಡು ಗಂಟೆಗಳ ಅಂತರದ ವ್ಯತ್ಯಾಸ ಮಾತ್ರ ಕಂಡು ಬರುತ್ತದೆ. ಆದರೆ, ಪ್ರಯೋಗಾಲಯಕ್ಕೆ ರವಾನೆಯಾಗಿರುವ ಕಾರ್ಬನ್‌ ಪ್ರತಿ ಮತ್ತು ಅಸಲಿ ಪ್ರತಿಯಲ್ಲಿ ಉತ್ತರ ತುಂಬಿರುವ ಅಂತರ ಬಹಳ ವ್ಯತ್ಯಾಸವಾಗಿದೆ. ಕೆಲವು ಪ್ರತಿಗಳಲ್ಲಿ 7 ಗಂಟೆಗಳ ವ್ಯತ್ಯಾಸ ಕಂಡು ಬಂದರೆ, ಇನ್ನೂ ಕೆಲವು ಪತ್ರಿಕೆಗಳಲ್ಲಿ ದಿನಗಳ ಅಂತರದಲ್ಲಿ ಉತ್ತರ ತುಂಬಿರುವ ವ್ಯತ್ಯಾಸ ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ.

Advertisement

ರುದ್ರಗೌಡಗೆ ಮತ್ತೊಂದು ಕುಣಿಕೆ
ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ರುದ್ರಗೌಡ ಅಲಿಯಾಸ್‌ ಆರ್‌.ಡಿ. ಪಾಟೀಲ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. 2021ರಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಜೆಇ, ಎಇ ಪರೀಕ್ಷೆಗಳನ್ನು ಬ್ಲೂಟೂತ್‌ ಬಳಸಿ ಬರೆಯಿಸಿದ್ದ ಪ್ರಕರಣದಲ್ಲಿ ಆರೋಪಿತನಾಗಿದ್ದ ರುದ್ರಗೌಡನನ್ನು ಮಂಗಳವಾರ ಬೆಳಗ್ಗೆ ಬೆಂಗಳೂರು ಅನ್ನಪೂರ್ಣೆಶ್ವರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಈ ಪ್ರಕರಣದಲ್ಲಿ ತಾನಿಲ್ಲ ಎಂದು ವಾದ ಮಾಡಿದ್ದ ರುದ್ರಗೌಡ ಕೊನೆಗೆ ಪೊಲೀಸರು ತೋರಿಸಿದ ಸಾಕ್ಷéಗಳು ಮತ್ತು ದಾಖಲೆಗಳನ್ನು ನೋಡಿದ ಬಳಿಕ ಸ್ನಾನ ಮುಗಿಸಿಕೊಂಡು ಹೊರಟ ಎಂದು ತಿಳಿದಿದೆ.

ಏಳನೇ ಆರೋಪಿ
ಬೆಂಗಳೂರಿನ ಅನ್ನಪೂರ್ಣೆಶ್ವರಿ ಠಾಣೆಯಲ್ಲಿ 2021, ಡಿ. 14ರಂದು ಪ್ರಕರಣ ದಾಖಲಾಗಿತ್ತು. ಅದರಲ್ಲಿ 7ನೇ ಆರೋಪಿಯಾಗಿದ್ದ ರುದ್ರ ಗೌಡ ತನ್ನ ಪ್ರಭಾವ ಬಳಸಿ ಚಾರ್ಜ್‌ಶೀಟ್‌ನಿಂದ ಹೆಸರು ತೆಗೆಯಿಸುವಲ್ಲಿ ಸಫಲನಾಗಿದ್ದ. ಇದೇ ಪ್ರಕರಣದಲ್ಲಿ ಇನ್ನೊಬ್ಬ ಕಿಂಗ್‌ಪಿನ್‌ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಸಿಕ್ಕಿ ಬಿದ್ದು ಜೈಲು ಪಾಲಾಗಿದ್ದ. ಈಗ ಈತ ಕಲಬುರಗಿ ಸಿಐಡಿ ವಶದಲ್ಲಿದ್ದ. ಪರೀಕ್ಷೆ ಬರೆದಿದ್ದ ಅಭ್ಯರ್ಥಿ ವೀರಣ್ಣಗೌಡ ಈ ಕುರಿತು ವಿಚಾರಣೆಯಲ್ಲಿ ರುದ್ರಗೌಡ ಹೆಸರು ಹೇಳಿ, ಅವರಿಂದ ಎಲೆಕ್ಟ್ರಾನಿಕ್‌ ಬ್ಲೂಟೂತ್‌ ಪಡೆದು ಬಳಕೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಬ್ಲೂಟೂತ್‌ ಬಳಕೆ ಮಾಡಲು ಹೊಸ ಬಟ್ಟೆಗಳನ್ನು ಕೂಡ ಹೊಲಿಸಿಕೊಂಡಿದ್ದು, ಅದರಲ್ಲಿ ಸಾಧನ ಇಟ್ಟುಕೊಳ್ಳಲು ಜಾಗೆ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದ.

ರಾಜಕಾರಣಿಗಳ ಸಹಕಾರ
ಬೆಂಗಳೂರು ಪ್ರಕರಣದಲ್ಲಿ ಅನೇಕ ಉನ್ನತ ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು ಆತನಿಗೆ ಸಹಾಯ ಮಾಡಿದ್ದಾರೆ. ಅದರಿಂದಾಗಿ ಅಂದು ಪಾರಾಗಿದ್ದ ರುದ್ರಗೌಡ ಮಂಗಳವಾರ ಪುನಃ ಅದೇ ಪ್ರಕರಣದಲ್ಲಿ ಪೊಲೀಸ್‌ ಪಾಲಾಗಿದ್ದಾನೆ. ಅಲ್ಲಿಂದಲೂ ಹೊರ ಬರುತ್ತಾನೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಕುರಿತು ಕೂಡ ತನಿಖೆ ನಡೆಯಬೇಕಿದೆ. ಸಹಾಯ ಮಾಡಿದ ಉನ್ನತ ಅಧಿಕಾರಿಗಳು, ರಾಜಕಾರಣಿ ಯಾರು ಎನ್ನುವುದು ಮತ್ತೊಂದು ಕೌತುಕ ಉಂಟು ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next