Advertisement

ಉಪ್ಪಿನ ಸತ್ಯಾಗ್ರಹದ 91ನೇ ವರ್ಷಾಚರಣೆ!

08:40 PM Apr 15, 2021 | Team Udayavani |

ಉಪ್ಪಿನ ಸತ್ಯಾಗ್ರಹ ಮಹತ್ವವಾದುದು! ­ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಣೆ

Advertisement

ಅಂಕೋಲಾ: ಚರಿತ್ರೆ ಮರೆತವರು ಚರಿತ್ರೆಯನ್ನು ನಿರ್ಮಿಸಲಾರರು ಎಂಬ ಮಾತೊಂದಿದೆ. ಅಂಕೋಲಾ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಕರ್ನಾಟಕದ ಬಾರ್ಡೋಲಿ ಎಂಬ ಖ್ಯಾತಿಗೆ ಕಾರಣವಾಗಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ಹಿರಿಯರ ತ್ಯಾಗ, ಬಲಿದಾನಗಳ ಬಗ್ಗೆ ತಿಳಿಯುವ ಆಸಕ್ತಿ ಯುವ ಜನಾಂಗಕ್ಕೆ ಇದ್ದಂತಿಲ್ಲ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಹೇಳಿದರು.

ಕಡಲು ಪ್ರಕಾಶನದ ವತಿಯಿಂದ ಮಂಗಳವಾರ ಅಂಕೋಲಾ ಉಪ್ಪಿನ ಸತ್ಯಾಗ್ರಹದ 91ನೇ ವರ್ಷಾಚರಣೆ ನಿಮಿತ್ತ ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ನಮ್ಮ ನೆಲದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಯುವಜನರಿಗೆ ಆಸಕ್ತಿ ಮೂಡಿಸಲು ಮತ್ತು ಅರಿತುಕೊಳ್ಳಲು ಸಹಾಯವಾಗುವುದಕ್ಕಾಗಿ ಮುಂದಿನ ಶೈಕ್ಷಣಿಕ ಹಂತದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಬೇಕು ಎಂಬ ಆಸೆ ನನ್ನದು. ಅದಕ್ಕೆ ಸಂಘಟಕರ ಪ್ರೋತ್ಸಾಹ ಅಗತ್ಯ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ ಮಾತನಾಡಿ, ಮಹಾತ್ಮಾ ಗಾಂಧೀಜಿ ಕರೆಯ ಮೇರೆಗೆ ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಅದ್ಭುತವಾದದ್ದು. ಬ್ರಿಟೀಷರ ವಿರುದ್ಧ ಸೆಟೆದು ನಿಂತ ವೀರ ಸೇನಾನಿಗಳನ್ನು ಈ ಮೂಲಕ ನೆನಪಿಸಿಕೊಳ್ಳುವಂತಾಗಿದೆ ಎಂದರು.

ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಉಪ್ಪಿನ ಸತ್ಯಾಗ್ರಹದಂದು ಅದರ ನೆನಪಿಗಾಗಿ ಹಳ್ಳಕ್ಕೆ ಬಾಗೀನ ಬಿಡುವ ಮೂಲಕ ಯುವಜನರಿಗೆ ತಲುಪಬೇಕು ಎನ್ನುವ ಆಶಯ ನಮ್ಮದು ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಸಂಚಾಲಕ ಉಮೇಶ ನಾಯ್ಕ, ಕಸಾಪ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಎನ್‌ಸಿಸಿ ಅಧಿ ಕಾರಿ ಜಿ.ಆರ್‌. ತಾಂಡೇಲ, ಸಂದೀಪ ಬಂಟ, ವರದಿಗಾರರಾದ ವಿದ್ಯಾಧರ ಮೊರಬಾ, ವಿಲಾಸ ನಾಯಕ, ರಾಮ ನಾಯಕ ಮಾತನಾಡಿದರು. ಕಡಲು ಪ್ರಕಾಶನದ ಸಂಚಾಲಕ ನಾಗರಾಜ ಮಂಜಗುಣಿ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next