Advertisement

ರಾಮನಗರ ಜಿಲ್ಲೆಯಾದ್ಯಂತ ಕಳೆದ 5 ವರ್ಷದಲ್ಲಿ 91 ಕೆ.ಜಿ.ಗಾಂಜಾ ವಶ

11:00 AM Sep 10, 2020 | sudhir |

ರಾಮನಗರ: ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಗಾಂಜಾ ಬೆಳೆ ವಿರುದ್ಧ ಜಿಲ್ಲಾ ಪೊಲೀಸರು, ಹದ್ದಿನ ಕಣ್ಣು ಇಟ್ಟಿದ್ದಾರೆ.

Advertisement

ಕಳೆದ 5 ವರ್ಷಗಳಲ್ಲಿ ಸುಮಾರು 91 ಕೆ.ಜಿ. ಗಾಂಜಾವನ್ನು ಜಿಲ್ಲಾದ್ಯಂತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, 52 ಪ್ರಕರಣ  ದಾಖಲಿಸಿದ್ದಾರೆ. ಕಳೆದೊಂದು ವಾರದಲ್ಲಿ ಪೊಲೀಸರು ಸುಮಾರು 15 ಕೆ.ಜಿ ಗಾಂಜಾ ವಶಕ್ಕೆ ಪಡೆದು 9 ಮಂದಿಯನ್ನು ಬಂಧಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಾದಕ ವಸ್ತುಗಳ ಕಮಟು ವಾಸನೆ ಬಂದ ಕೂಡಲೇ ಜಿಲ್ಲೆಯಲ್ಲಿ ಪೊಲೀಸರು ಇನ್ನಷ್ಟು ಅಲರ್ಟ್‌ ಆಗಿದ್ದಾರೆ. ಕಳೆದ ವರ್ಷ ಐಜೂರು ಠಾಣೆ ಪೊಲೀಸರು 4.4 ಲಕ್ಷ ರೂ., ಮೌಲ್ಯದ 44 ಕೆ.ಜಿ. ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು.
ಕಳೆದೊಂದು ವಾರದಲ್ಲೇ ಸುಮಾರು 15 ಕೆ.ಜಿ ಗಾಂಜಾವನ್ನು ಪೊಲೀಸರು ಅಮಾನತುಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಇತ್ತೀಚೆಗಷ್ಟೆ ವರ್ಗಾವಣೆ  ಆಗಿರುವ ಎಸ್ಪಿ ಅನೂಪ್‌ ಎ.ಶೆಟ್ಟಿ ಮಾದಕ ದ್ರವ್ಯ ಮತ್ತು ವಸ್ತುಗಳ ವಿರುದ್ಧ ಸಮರವನ್ನೇ ಸಾರಿದ್ದರು. ಇದೀಗ ನೂತನ ಎಸ್ಪಿಯಾಗಿ ವರ್ಗವಾಗಿರುವ ಎಸ್‌.ಗಿರೀಶ್‌ ಅವರೂ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಕೃಷಿ ಬೆಳೆ ನಡುವೆ ಗಾಂಜಾ ಬೆಳೆ: ಹಣದಾಸೆಗೆ ಬಿದ್ದಿರುವ ಅನೇಕರು ಗ್ರಾಮಗಳಲ್ಲಿ ತಮ್ಮ ತೋಟ, ಗದ್ದೆ, ಮನೆಯ ಹಿತ್ತಲು ಹೀಗೆ ಅನ್ಯ ಗಿಡಗಳು, ಕೃಷಿ ಬೆಳೆಗಳ ನಡುವೆ ಗಾಂಜಾ ಗಿಡ ಬೆಳೆಸಿರುವ ಪ್ರಕರಣ ಪತ್ತೆಯಾಗುತ್ತಿವೆ. ಆ.30ರಂದು ಬಿಡದಿ ಠಾಣೆ ವ್ಯಾಪ್ತಿಯ ಬೆತ್ತನಗೆರೆ ಗ್ರಾಮದ ಜಮೀನಿನಲ್ಲಿ ತೊಗರಿ, ಮೆಣಸಿನಕಾಯಿ ಮಧ್ಯೆ ಬೆಳೆಯಲಾಗಿದ್ದ 40 ಸಾವಿರ ಮೌಲ್ಯದ 10 ಕೆ.ಜಿ.ಯನ್ನು ವಶಕ್ಕೆ ಪಡೆದಿದ್ದರು.

ಇದೇ ದಿನ ಕಗ್ಗಲಿಪುರ ಠಾಣೆ ವ್ಯಾಪ್ತಿಯಲ್ಲಿ ಗುಳಕ ಮಲೆ ಗ್ರಾಮದ ಬಳಿ ವಿಜಯ್‌ ಕುಮಾರ್‌ ಎಂಬವರ ತೋಟದಲ್ಲಿ ಇಬ್ಬರನ್ನು ಬಂಧಿಸಿ 145 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು. ಸೆ.8ರಂದು ಜಿಲ್ಲೆಯ ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಬೆಟ್ಟೇಗೌಡನ ದೊಡ್ಡಿ ಗ್ರಾಮದಲ್ಲಿ ಅಲಗೇ ಗೌಡ ಎಂಬ ವ್ಯಕ್ತಿ ತನ್ನ ಮನೆ ಹಿತ್ತಲಲ್ಲಿ ಈರೇಕಾಯಿ, ಸೌತೇ ಕಾಯಿ ಬಳ್ಳಿಗಳ ಮಧ್ಯೆ ಬೆಳೆಸಿದ್ದ ಗಾಂಜಾ ಗಿಡ ಪತ್ತೆ ಹಚ್ಚಿದ್ದರು. ಜಿಲ್ಲೆಯ ನಗರ, ಪಟ್ಟಣ, ಪ್ರವಾಸೋದ್ಯಮ ತಾಣ, ರೈಲು, ಬಸ್‌ ನಿಲ್ದಾಣ, ಕಾಲೇಜು ಬಳಿ, ಪ್ರಮುಖ ವೃತ್ತ ಹೀಗೆ ಜನನಿಬಿಡ ಪ್ರದೇಶ, ಅಕ್ರಮ ಮದ್ಯ ಸ್ಥಳಗಳಲ್ಲಿ ನಿಗಾ ಇಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next