ಬೆಂಗಳೂರು: ತನ್ನ ತಂದೆ ಶಾಸಕ ಹಾಗೂ ತನ್ನ ಸ್ನೇಹಿತ ರಾಜ್ಯದ ಪ್ರಭಾವಿ ಸಚಿವರ ಆಪ್ತ ಎಂದು ನಂಬಿಸಿ ಸರ್ಕಾರದ ನಿವೇಶನಗಳನ್ನು ಕೇವಲ 2 ಲಕ್ಷ ರೂ.ಗೆ ಕೊಡಿಸುತ್ತೇನೆ ಎಂದು ಪರಿಚಯಸ್ಥ ಮಹಿಳೆ ಸೇರಿ ಆಕೆಯ ಸಂಬಂಧಿಕರು, ಸ್ನೇಹಿತರಿಗೆ ಬರೋಬರಿ 90 ಲಕ್ಷ ರೂ. ಮೋಸ ಮಾಡಿದ ವಂಚಕ ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಯಶವಂತಪುರ ನಿವಾಸಿ ವಾದಿರಾಜು ಬಂಧಿತ. ಆರೋಪಿ, ರೂಪಾ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ಸೇರಿದಂತೆ ಆಕೆಯ ಸಹೋದರ ಸಂಬಂಧಿಕರು, ಸ್ನೇಹಿತರಿಂದ ಸರ್ಕಾರದ ನಿವೇಶನಗಳನ್ನು ಕೊಡಿಸುವುದಾಗಿ ಕಳೆದ ಮೂರು ತಿಂಗಳಲ್ಲಿ 90 ಲಕ್ಷ ರೂ. ಹಣ ಸಂಗ್ರಹಿಸಿ ವಂಚಿಸಿದ್ದ ಎಂದು ಪೊಲೀಸರು ಹೇಳಿದರು.
ಪತಿಯಿಂದ ದೂರವಾಗಿ ಇಬ್ಬರು ಮಕ್ಕಳ ಜತೆ ಬೆಂಗಳೂರಿನಲ್ಲಿ ವಾಸವಾಗಿರುವ ರೂಪಾ ಅವರನ್ನು ಆರೋಪಿ ವಾದಿರಾಜು, 2017ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯಸಿಕೊಂಡಿದ್ದಾನೆ. ಬಳಿಕ “ನಾನು ಅವಿವಾಹಿತ. ನೀವು ನೋಡಲು ಸುಂದರವಾಗಿದ್ದೀರ. ಒಪ್ಪಿದರೆ ಮದುವೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದ. ಅಲ್ಲದೆ, ಕಿರುತೆರೆಯಲ್ಲಿ ನಟಿಸಲು ಅವಕಾಶ ಸಹ ಕೊಡಿಸುತ್ತೇನೆ ಎಂದು ನಂಬಿಸಿದ್ದ.
ಕೆಲ ದಿನಗಳ ಬಳಿಕ ಯಶವಂತಪುರದ ಲಾಡ್ಜ್ ಒಂದರ ಬಳಿ ಕರೆಸಿಕೊಂಡು, “ಈ ಕಟ್ಟಡ ನನ್ನದು. ಇನ್ನು ಒಂದೆರಡು ದಿನಗಳಲ್ಲಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳೋಣ. ಸಂಸಾರ ಮಾಡಲು ಮನೆ ಮಾಡಲು 5-6 ಲಕ್ಷ ರೂ. ಹಣ ಬೇಕಿದೆ. ಸದ್ಯ ನನ್ನ ಬಳಿ ಅಷ್ಟೊಂದು ಹಣವಿಲ್ಲ. ನೀವು ಕೊಟ್ಟರೆ ಹಿಂದಿರುಗಿತ್ತೇನೆ,’ ಎಂದು ನಂಬಿಸಿದ್ದಾನೆ. ಈತನ ಮಾತು ನಂಬಿದ ರೂಪಾ ಕೂಡಲೇ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸಹೋದರಿಯಿಂದ 5 ಲಕ್ಷ ರೂ. ಹಣವನ್ನು ತಂದು ಕೊಟ್ಟಿದ್ದರು.
ಸಚಿವರ ಆಪ್ತರು: “ನನಗೆ ಹರೀಶ್‌ಗೌಡ ಮತ್ತು ರಾಕೇಶ್‌ಗೌಡ ಎಂಬ ಸ್ನೇಹಿತರಿದ್ದು, ರಾಜ್ಯದ ಪ್ರಭಾವಿ ಸಚಿವರ ಆಪ್ತರಾಗಿದ್ದಾರೆ. ಅವರ ಪ್ರಭಾವ ಬಳಸಿ ಸರ್ಕಾರದ ನಿವೇಶನಗಳನ್ನು ಕೇವಲ 2 ಲಕ್ಷ ರೂ.ಗೆ ಕೊಡಿಸುತ್ತಾರೆ. ನಿಮ್ಮ ಹತ್ತಿರದ ಸಂಬಂಧಿಗಳಿಗೆ ತಿಳಿಸಿ, ಯಾರಾದರೂ ನಿವೇಶನ ಬೇಕೆಂದರೆ ಹಣ ತರಲು ತಿಳಿಸಿ,’ ಎಂದು ರೂಪಾ ಅವರನ್ನು ಆರೋಪಿ ನಂಬಿಸಿದ್ದಾನೆ.
ಈತನ ಬಣ್ಣದ ಮಾತಿಗೆ ಮರುಳಾದ ಆಕೆ, ತನ್ನ ಸಹೋದರಿ, ಸಂಬಂಧಿಕರು, ಸ್ನೇಹಿತರಿಂದ ಒಟ್ಟು 45 ನಿವೇಶನಗಳು ಬೇಕೆಂದು 90 ಲಕ್ಷ ರೂ. ಕೊಡಿಸಿದ್ದಾರೆ. ಅಷ್ಟೇ ಅಲ್ಲದೆ, ರೂಪಾ ಅವರ ಹಣದಿಂದಲೇ ವಾದಿರಾಜು, ಹೊಸ ಮೊಬೈಲ್ ಹಾಗೂ ಎರಡು ಸಿಮ್‌ಕಾರ್ಡ್‌ಗಳನ್ನು ಖರೀದಿಸಿ, ಹಣ ಕೊಡದೆ, ನಿವೇಶನವನ್ನೂ ಕೊಡಿಸದೆ ಪರಾರಿಯಾಗಿದ್ದ. ಈ ಸಂಬಂಧ ರೂಪಾ ಅವರು ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತಮಿಳುನಾಡಿನಲ್ಲಿದ್ದ ಆರೋಪಿ: ನ.13ರಂದು ಯಶವಂತಪುರ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಈ ಮಾಹಿತಿ ಸಂಗ್ರಹಿಸಿ, ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.