Advertisement

90 ಸೈಬರ್‌ ಆರೋಪಿಗಳ ಮಾಹಿತಿ ಸಂಗ್ರಹ

04:36 PM Dec 05, 2017 | |

ಬೆಂಗಳೂರು: ರಾಜ್ಯ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿರುವ ಸುಮಾರು 90 ಆರೋಪಿಗಳನ್ನು ಗುರುತಿಸಲಾಗಿದ್ದು, ಅನ್ಯ ರಾಜ್ಯಗಳ ಸಹಯೋಗದಲ್ಲಿ ಅಪರಾಧಿಗಳ ಮಾಹಿತಿ ಕೋಶ ಸಿದ್ಧಪಡಿಸಿ ಪರಸ್ಪರ ವಿನಿಮಯದ ಮೂಲಕ ಪ್ರಕರಣ ಭೇದಿಸಲು ಪ್ರಯತ್ನ ನಡೆದಿದೆ ಎಂದು ಸಿಐಡಿ ಐಜಿಪಿ (ಆರ್ಥಿಕ ಅಪರಾಧಗಳು) ಎಂ.ಚಂದ್ರಶೇಖರ್‌ ಹೇಳಿದರು.

Advertisement

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೈಬರ್‌ ಅಪರಾಧ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಪದೇ ಪದೆ ಭಾಗಿಯಾಗುತ್ತಿರುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜತೆಗೆ ದೇಶದ ಇತರೆ ರಾಜ್ಯಗಳಲ್ಲಿ ಸಂಭವಿಸುವ ಸೈಬರ್‌ ಅಪರಾಧಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸರೊಂದಿಗೆ ಮಾಹಿತಿ ವಿನಿಮಯದ ಮೂಲಕ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನೋಟು ಅಮಾನ್ಯದ ಬಳಿಕ ಡಿಜಿಟಲೀಕರಣವೂ ತಳಮಟ್ಟಕ್ಕೂ ವಿಸ್ತರಣೆಯಾಗಿದ್ದು, ಡಿಜಿಟಲ್‌ ತಂತ್ರಜ್ಞಾನದಡಿ ಆರ್ಥಿಕ ವ್ಯವಹಾರ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್‌ ಅಪರಾಧ ಪ್ರಕರಣಗಳನ್ನು ಭೇದಿಸುವ ಕಾರ್ಯದ ಜತೆಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಕೆವೈಸಿ ವಿವರದ ಕೊರತೆ: ಕೆವೈಸಿ ಅಡಿ (ನೋ ಯುವರ್‌ ಕಸ್ಟಮರ್‌) ಗ್ರಾಹಕರ ಸೂಕ್ತ ವಿವರವಿಲ್ಲದೇ ಮೊಬೈಲ್‌ ಸಿಮ್‌ ಕಾರ್ಡ್‌ ನೀಡುವುದು, ಬ್ಯಾಂಕ್‌ ಖಾತೆ ತೆರೆಯಲು ಅವಕಾಶ ನೀಡಿಕೆಯಿಂದ ಸೈಬರ್‌ ಅಪರಾಧಗಳು ಹೆಚ್ಚಾಗಿವೆ. ಪ್ರೀ ಆಕ್ಟಿವೇಟೆಡ್‌ ಮೊಬೈಲ್‌ ಸಿಮ್‌ ನೀಡುವುದು, ವಾಸ್ತವದ ವಿವರಗಳಿಲ್ಲದೇ ಬ್ಯಾಂಕ್‌ ಖಾತೆ ತೆರೆಯಲು ಅವಕಾಶ ನೀಡುತ್ತಿರುವುದರಿಂದ ಅಕ್ರಮ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಾಗೃತಿ ಹೆಚ್ಚಾಗಬೇಕು ಎಂದು ತಿಳಿಸಿದರು.

ಜಗತ್ತಿನಾದ್ಯಂತ 2015ರಲ್ಲಿ ಸೈಬರ್‌ ಅಪರಾಧದಿಂದಾಗಿ 400 ಶತಕೋಟಿ ಡಾಲರ್‌ನಷ್ಟು ನಷ್ಟ ಸಂಭವಿಸಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ದೇಶದಲ್ಲಿ ಸೈಬರ್‌ ಅಪರಾಧದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದರೆ ಎಲ್ಲ ಸೈಬರ್‌ ಅಪರಾಧಗಳಲ್ಲೂ ಪ್ರಕರಣ ದಾಖಲಾಗದಿರುವುದು ಕಂಡುಬಂದಿದೆ. ತಂತ್ರಜ್ಞಾನ ಬದಲಾದಂತೆ ಸೈಬರ್‌ ಅಪರಾಧದ ಸ್ವರೂಪವೂ ಬದಲಾಗುತ್ತಿದ್ದು, ವಾಣಿಜ್ಯ, ಆರ್ಥಿಕ ಸಂಸ್ಥೆಗಳು ಒಂದಿಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಸೂಕ್ತ ಎಂದು ಹೇಳಿದರು.

Advertisement

ಬ್ಯಾಂಕ್‌ ಇತರೆ ಹಣಕಾಸು ಸಂಸ್ಥೆಗಳು, ಕಂಪನಿಗಳಲ್ಲಿ ಗ್ರಾಹಕರ ಎಲ್ಲ ಖಾಸಗಿ ಮಾಹಿತಿಯನ್ನು ಎಲ್ಲರೂ ವೀಕ್ಷಿಸಲು, ಬಳಸಲು ಅವಕಾಶ ನೀಡದೆ ಆಯ್ದ ಮಂದಿಯ ಬಳಕೆಗಷ್ಟೇ ಅವಕಾಶ ಕಲ್ಪಿಸುವುದು ಒಳಿತು. ಶೇ.60ರಷ್ಟು ಸೈಬರ್‌ ಅಪರಾಧಗಳಲ್ಲಿ ಹೊರಗಿನವರಿಗಿಂತ ಒಳಗಿನ ವ್ಯಕ್ತಿಗಳೇ ಶಾಮೀಲಾಗಿರುವುದು ಕಂಡುಬಂದಿದ್ದು, ಈ ಬಗ್ಗೆಯೂ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದರು.

ಪ್ರಕರಣ ಭೇದಿಸುವಲ್ಲಿನ ಸವಾಲು: ಸೈಬರ್‌ ಅಪರಾಧ ಪ್ರಕರಣಗಳ ತನಿಖೆ ವೇಳೆ ಯಾವುದೇ ಮಾಹಿತಿ ಪಡೆಯುವಾಗ ಖಾಸಗಿತನ, ಸುರಕ್ಷತೆಯ ಅಂಶಗಳು ಸಾಕಷ್ಟು ಸವಾಲೊಡ್ಡುತ್ತವೆ. ಆರೋಪಿಗಳ ಜಾಡು ಹಿಡಿದು ಹೊರಟಾಗ ಗೂಗಲ್‌, ಫೇಸ್‌ಬುಕ್‌ ಸೇರಿದಂತೆ ಇತರೆ ಸಂಸ್ಥೆಗಳ ಬಳಕೆದಾರರ ಮಾಹಿತಿಯು ಅನ್ಯ ದೇಶಗಳಲ್ಲಿನ ಕೇಂದ್ರ ಕಚೇರಿಯಲ್ಲಿರುವುದರಿಂದ ಮಾಹಿತಿ ಪಡೆಯುವುದು ಸವಾಲೆನಿಸಿದೆ. 69 ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಅನ್ಯ ದೇಶದಲ್ಲಿನ ಸಂಸ್ಥೆಗಳಿಂದ ಮಾಹಿತಿ ಕೋರಲಾಗಿದೆ ಎಂದು ಚಂದ್ರಶೇಖರ್‌ ತಿಳಿಸಿದರು.

ಸೈಬರ್‌ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವಿಲ್ಲ. ಹಾಗಾಗಿ ಇತರೆ ಪ್ರಕರಣಗಳಂತೆ ಸೈಬರ್‌ ಅಪರಾಧ ಪ್ರಕರಣಗಳು ಸಾಮಾನ್ಯ ವ್ಯವಸ್ಥೆಯಲ್ಲೇ ವಿಚಾರಣೆಗೆ ಒಳಪಡಬೇಕಿದೆ. ಬಿಟ್‌ಕಾಯಿನ್‌ ವ್ಯವಹಾರ ಕಾನೂನುಬಾಹಿರ ಎಂದು ಎಲ್ಲಿಯೂ ಸ್ಪಷ್ಟತೆ ಇಲ್ಲ. ಹಾಗಾಗಿ ಈ ಹಂತದಲ್ಲಿ ಆ ವ್ಯವಹಾರದ ಬಗ್ಗೆ ಏನನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ಸೈಬರ್‌ ಅಪರಾಧ ಪ್ರಕರಣಗಳ ನಿಯಂತ್ರಕ್ಕೆ ಸಂಬಂಧಪಟ್ಟಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಅಗತ್ಯ ತಿದ್ದುಪಡಿ, ಇನ್ನಷ್ಟು ಬಿಗಿ ನಿಯಮಾವಳಿ ರೂಪಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಎಫ್ಕೆಸಿಸಿಐ ಉಪಾಧ್ಯಕ್ಷ ಸಿ.ಆರ್‌.ಜನಾರ್ದನ್‌, ಹಿರಿಯ ಉಪಾಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ, ನಾಗರಿಕ ವ್ಯವಹಾರ ಮತ್ತು ನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಬಿ.ಅಮರನಾಥ್‌ ಇತರರು ಉಪಸ್ಥಿತರಿದ್ದರು.

ಡಿಜಿಟಲ್‌ ಸಹಿ ಊರ್ಜಿತವಲ್ಲ: ಸೈಬರ್‌ ಅಪರಾಧ ಪ್ರಕರಣಗಳಲ್ಲಿ ದೂರುದಾರರು ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿದರೆ ಪಡೆಯುವ ಎಫ್ಐಆರ್‌ನಲ್ಲಿ ಡಿಜಿಟಲ್‌ ಸಹಿಯಿದ್ದರೂ ಅದನ್ನು ಬ್ಯಾಂಕ್‌ಗಳು ಮಾನ್ಯ ಮಾಡುವುದಿಲ್ಲ. ಹಾಗಾಗಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿ ಸಹಿಯಿರುವ ಎಫ್ಐಆರ್‌ ಪ್ರತಿ ಪಡೆದರೆ ಬ್ಯಾಂಕ್‌ ವ್ಯವಹಾರಕ್ಕೂ ಅನುಕೂಲವಾಗಲಿದೆ ಎಂದು ಐಜಿಪಿ ಚಂದ್ರಶೇಖರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಚಿತ ವೈ-ಫೈನಲ್ಲಿ ಇ-ಬ್ಯಾಂಕಿಂಗ್‌ ಬೇಡ: ಉಚಿತ ವೈ-ಫೈ ಸೇವೆ ಇರುವ ಪ್ರದೇಶದಲ್ಲಿ ಬ್ರೌಸ್‌ ಮಾಡಬಹುದಾದರೂ ಇ-ಬ್ಯಾಂಕಿಂಗ್‌ ವ್ಯವಹಾರ ನಡೆಸುವುದು ಅಷ್ಟು ಸುರಕ್ಷಿತವಲ್ಲ. ಇ-ಬ್ಯಾಂಕಿಂಗ್‌ ವ್ಯವಹಾರ ಸೇರಿದಂತೆ ಇತರೆ ಆನ್‌ಲೈನ್‌ ಆರ್ಥಿಕ ವ್ಯವಹಾರವನ್ನು ಉಚಿತ ವೈ- ಫೈ ವ್ಯಾಪ್ತಿ ಪ್ರದೇಶದಲ್ಲಿ ಕೈಗೊಳ್ಳದಿರುವುದು ಒಳಿತು ಎಂದು ಕಿವಿಮಾತು ಹೇಳಿದರು.

ವಾಣಿಜ್ಯ ಸಂಸ್ಥೆಗಳಿಗೆ ಕಿವಿಮಾತು
-ವಾಣಿಜ್ಯ/ ಆರ್ಥಿಕ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರು, ಪದಾಧಿಕಾರಿಗಳು ಸೈಬರ್‌ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು
-ಸೈಬರ್‌ ಆಡಿಟ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು
-ನೌಕರ, ಸಿಬ್ಬಂದಿಗೆ ತರಬೇತಿ ನೀಡಿ ಜಾಗೃತಿ ಮೂಡಿಸಲು ಆದ್ಯತೆ ನೀಡಬೇಕು
-ಆ್ಯಂಟಿ ವೈರಸ್‌ ಸಾಧನಗಳನ್ನು ಅಳವಡಿಸಿಕೊಳ್ಳುವುದು, ನಿಯಮಿತವಾಗಿ ಅಪ್‌ಡೇಟ್‌ ಮಾಡುವುದು
-ಅಪರಿಚಿತ ಇ-ಮೇಲ್‌, ಅಟ್ಯಾಚ್‌ಮೆಂಟ್‌ಗಳನ್ನು ಏಕಾಏಕಿ ತೆರೆಯುವುದು, ಡೌನ್‌ಲೋಡ್‌ ಮಾಡುವುದು ಸರಿಯಲ್ಲ
-ಡೇಟಾ ಬ್ಯಾಕ್‌ಅಪ್‌ ನಿಯಮಿತವಾಗಿರಲಿ

Advertisement

Udayavani is now on Telegram. Click here to join our channel and stay updated with the latest news.

Next