ದಾವಣಗೆರೆ: ಪವಿತ್ರ ಅಮರನಾಥ ಯಾತ್ರೆಗೆ ತೆರಳಿದ್ದಂತಹ ನಾಲ್ವರು ಮಹಿಳೆಯರು ಒಳಗೊಂಡಂತೆ 9 ಜನರು ಸುರಕ್ಷಿತವಾಗಿ ದಾವಣಗೆರೆಗೆ ವಾಪಾಸ್ ಆಗಿದ್ದಾರೆ.
ದಾವಣಗೆರೆಯ ಎನ್.ಆರ್. ಗೀತಾ, ಬಿ.ಜಿ. ಪುಷ್ಪಾ, ಎನ್.ವಿ. ಉಷಾರಾಣಿ, ಸಿ.ಎಚ್. ಚಂದ್ರಿಕಾ ಸೇರಿದಂತೆ ಒಂಭತ್ತು ಜನರು ವಾಪಾಸ್ ಆಗಿದ್ದಾರೆ.
ದಾವಣಗೆರೆ ಸಮೀಪದ ನಾಗನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಎನ್.ಆರ್. ಗೀತಾ ತಮ್ಮ ಸ್ನೇಹಿತರೊಂದಿಗೆ ಜು. 3 ರಂದು ದಾವಣಗೆರೆಯಿಂದ ಜಮ್ಮುವಿಗೆ ತೆರಳಿದ್ದರು. ಜು. ೬ ರಂದು ಅಮರನಾಥ ದರ್ಶನಕ್ಕೆ ಸಮಯ ನಿಗದಿಯಾಗಿತ್ತು. ಅಮರನಾಥ ಗುಹೆಯ ಸಮೀಪದ ಬಲ್ಟಾಲ್ ಕ್ಯಾಂಪ್‌ನಲ್ಲಿ ನಾಲ್ವರು ತಂಗಿದ್ದರು.
ನಿಗದಿತ ಸಮಯದಂತೆ ಜು. 6 ರಂದು ಅಮರನಾಥ ದರ್ಶನ ಮುಗಿಸಿಕೊಂಡು ಬೇಸ್ ಕ್ಯಾಂಪ್ ಬಲ್ಟಾಲ್ ಸೇರುತ್ತಿದ್ದಂತೆ ಅದೇ ದಿನ ಸಂಜೆಯೇ ಧಾರಾಕಾರ ಮಳೆ, ಕೆಲವೆಡೆ ಭೂ ಕುಸಿತ ಪ್ರಾರಂಭವಾಗಿತ್ತು. ಹಾಗಾಗಿ ವಾಪಾಸ್ ಆಗುವುದು ಚಿಂತೆಯ ವಿಷಯವಾಗಿತ್ತು. ಬಲ್ಟಾಲ್ ಬೇಸ್‌ಕ್ಯಾಂಪ್‌ನಿಂದ ಪ್ರಯಾಣ ಪ್ರಾರಂಭಿಸಿ ಸೋನುಮಾರ್ಗಕ್ಕೆ ಬರುವ ವೇಳೆಗೆ ಅಲ್ಲಿಯೂ ಭೂ ಕುಸಿತವಾಗಿತ್ತು. ಕಣ್ಣೆದುರೆ ಕೆಲವೇ ಕೆಲ ಮೀಟರ್‌ಗಳ ಅಂತರದಲ್ಲಿ ಭೂ ಕುಸಿತ ಆಗುತ್ತಿರುವ ಜೊತೆಗೆ ಮೇಘಸ್ಪೋಟವೂ ಸಂಭವಿಸಿದ್ದರಿಂದ ವಾಪಾಸ್ ಆಗುವುದು ಅಷ್ಟೊಂದು ಸುಲಭದ್ದಾಗಿರಲಿಲ್ಲ.
ಬೆಂಗಳೂರಿನ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಕೆ.ಎಂ. ಗಂಗಾಧರಸ್ವಾಮಿ ಅವರು ನೀಡಿದ ಸೂಕ್ತ ಮಾರ್ಗದರ್ಶನ, ತೋರಿದ ಸಮಯಪ್ರಜ್ಞೆಯಿಂದ ನಾಲ್ವರು ಸುರಕ್ಷಿತವಾಗಿ ಶ್ರೀನಗರ ತಲುಪು ವಂತಾಯಿತು.
ಶ್ರೀನಗರದಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ನಾಲ್ವರು ಭಾನುವಾರ ತಡರಾತ್ರಿ ದಾವಣಗೆರೆ ಗೆ ಆಗಮಿಸಿದರು. ಅಮರನಾಥನ ಆಶೀರ್ವಾದ ಇರುವ ಕಾರಣಕ್ಕೆ ನಾವೆಲ್ಲರೂ ಯಾವುದೇ ಅಪಾಯ ಇಲ್ಲದೆ ಸುರಕ್ಷಿತವಾಗಿ ವಾಪಾಸ್ ಆಗಿದ್ದೇವೆ ಎಂದು ಶಿಕ್ಷಕಿ ಗೀತಾ ತಿಳಿಸಿದರು.