Advertisement

9 ಜನ ಸೋಂಕಿತರು ಗುಣಮುಖ

02:02 PM Jun 06, 2020 | Suhan S |

ಗದಗ: ಕೋವಿಡ್‌-19 ಸೋಂಕಿನಿಂದ ಬಳಲುತ್ತಿದ್ದ ಜಿಲ್ಲೆಯ ಎಂಟು ವರ್ಷದ ಮಗು ಸೇರಿದಂತೆ ಒಟ್ಟು 9 ಜನರು ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ದೃಢ ಪಟ್ಟಿರುವ ಒಟ್ಟು 37 ಪ್ರರಕಣಗಳಲ್ಲಿ ಇಂದಿನ 9 ಸೇರಿ 26 ಜನರು ಗುಣಮುಖರಾಗಿರುವುದು ಸಮಾಧಾನಕರವಾಗಿದ್ದರೂ, ದಿನಕಳೆದಂತೆ ಸೋಂಕು ನಿಗೂಢವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮುಂದುವರಿದಿದೆ.

Advertisement

ಗುಜರಾತದಿಂದ ಆಗಮಿಸಿದ್ದ 62 ವರ್ಷದ (ಪಿ.970) ವ್ಯಕ್ತಿ, ಮುಂಬೈನಿಂದ ಆಗಮಿಸಿದ್ದ 32 ವರ್ಷದ (ಪಿ. 1566) ವ್ಯಕ್ತಿಗೆ ಕ್ರಮವಾಗಿ ಮೇ 14 ಹಾಗೂ ಮೇ 21ರಂದು ಕೋವಿಡ್‌-19 ಸೋಂಕು ದೃಢ ಪಟ್ಟಿತ್ತು. ತಕ್ಷಣ ಅವರನ್ನು ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಜಿ ಬಸವೇಶ್ವರ ಸರ್ಕಲ್‌ ಪ್ರದೇಶದ ಪಿ-913 ಅವರ ದ್ವೀತಿಯ ಸಂಪರ್ಕದಿಂದ ಮೇ 23ರಂದು ಸೋಂಕಿಗೆ ಒಳಗಾಗಿದ್ದ, 50 ವರ್ಷದ ಮಹಿಳೆ(ಪಿ.1932), 19 ವರ್ಷದ ಯುವತಿ (ಪಿ. 1933), 22 ವರ್ಷದ ಯುವತಿ (ಪಿ. 1934), 18 ವರ್ಷದ ಯುವಕ (ಪಿ.1935), 48 ವರ್ಷದ ವ್ಯಕ್ತಿ (ಪಿ. 1936), 8 ವರ್ಷದ ಬಾಲಕಿ (ಪಿ. 1937) ಹಾಗೂ 21 ವರ್ಷದ ವ್ಯಕ್ತಿ (1938)ಗೆ ಸೋಂಕು ಕಂಡು ಬಂದಿತ್ತು. ಅವರನ್ನು ಕೂಡಲೇ ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಮ್ಸ್‌ ಆಸ್ಪತ್ರೆಯ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸೋಂಕಿತರನ್ನು ಗುಣಪಡಿಸುವಲ್ಲಿ ಸಫಲರಾಗಿದ್ದಾರೆ.

ಹೀಗಾಗಿ ಅವರಲ್ಲಿ ಕೋವಿಡ್‌ಗೆ ಸಂಬಂಧಿಸಿ ಯಾವುದೇ ರೀತಿಯ ಗಂಭೀರ ಲಕ್ಷಣಗಳು ಕಂಡು ಬಂದಿಲ್ಲ. ಅಲ್ಲದೇ, ಜೂ. 4ರಂದು ಸೋಂಕಿತ 9 ಜನರ ಗಂಟಲಿನ ದ್ರವದ ಮಾದರಿಯನ್ನು ಕೋವಿಡ್‌ ಮರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ವರದಿ ನೆಗೇಟಿವ್‌ ಆಗಿದ್ದರಿಂದ ಎಲ್ಲರೂ ಸೋಂಕಿನಿಂದ ಗುಣಮುಖರಾರುವುದು ಖಚಿತವಾದ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಪತ್ರೆಯಿಂದ ಡಿಸಾcರ್ಜ್‌ ಮಾಡಲಾಗಿದೆ ಎಂದು ಜಿಮ್ಸ್‌ ನಿರ್ದೇಶಕ ಡಾ|ಪಿ.ಎಸ್‌.ಭೂಸರೆಡ್ಡಿ ಮಾಹಿತಿ ನೀಡಿದರು.

ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಶುಭ ಕೋರಿದರು. ಇದೇ ವೇಳೆ ಸ್ಯಾನಿ ಟೈಸರ್‌, ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ, ಮುಂದಿನ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಓಡಾಡಬಾರದು ಎಂದು ವೈದ್ಯರು ಸೂಚಿಸಿದರು.

ಮುಂದುವರಿದ ಆತಂಕ: ಒಂದೆಡೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಜೊತೆ ಜೊತೆಗೆ ನಗರ ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಸೋಂಕು ಕಂಡು ಬರುತ್ತಿದೆ. ಯಾವುದೇ ರೀತಿಯ ಪ್ರಯಾಣದ ಹಿನ್ನೆಲೆ ಇರದ್ದರೂ, ನಿಗೂಢವಾಗಿ ಸೋಂಕು ಹರಡುತ್ತಿರುವುದು ಸಹಜವಾಗಿಯೇ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

Advertisement

ಗದಗ ನಗರದ ರಂಗನವಾಡದ ಪಿ.166, ಹಾಗೂ ಗಂಜೀ ಬಸವೇಶ್ವರ ಮೊದಲಗಳ ಮೂಲ ಇಂದಿಗೂ ಪತ್ತೆಯಾಗಿಲ್ಲ. ಅವರೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕದಿಂದ ನಗರದಲ್ಲಿ ಸೋಂಕು ವ್ಯಾಪಿಸಿತ್ತು. ಗ್ರೀನ್‌ ಜೋನ್‌ನಲ್ಲಿದ್ದ ಅವಳಿ ನಗರ ಕೆಂಪು ವಲಯಕ್ಕೆ ತಿರುಗಿತ್ತು. ಇದರ ಮಧ್ಯೆ ನಗರದಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದರಿಂದ ಜನರು ನಿರಾಳರಾಗುಷ್ಟರಲ್ಲಿ ಮತ್ತೆ ಹೊಸ ಪ್ರಕರಣಗಳು ಕಂಡು ಬರುತ್ತಿವೆ. ಅದರಲ್ಲೂ ತಾಲೂಕಿನ ಲಕ್ಕುಂಡಿಯ ಹಾಗೂ ಹುಡ್ಕೋ ಕಾಲೋನಿಯ ವ್ಯಕ್ತಿಗಳಿಗೆ ಸೋಂಕು ಹರಿಡಿದ್ದು ಹೇಗೆ ಎಂಬುದು ನಿಗೂಢವಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ್ದ ಒಟ್ಟು 7,066 ಮಾದರಿಗಳಲ್ಲಿ 37 ಪಾಸಿಟಿವ್‌, 6,829 ಮಾದರಿಗಳು ನೆಗೆಟಿವ್‌ ಆಗಿವೆ. 26 ಜನರು ಸೋಂಕಿನಿಂದ ಮುಕ್ತರಾಗಿದ್ದು, 9 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ 200 ಜನರ ವರದಿ ಬರಲು ಬಾಕಿ ಇವೆ. –ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next