ಸಾಗರ: ಮಹಾಮಾರಿ ಮಂಗನಕಾಯಿಲೆ ಉಲ್ಬಣ ಗೊಳ್ಳುತ್ತಲೇ ಇದ್ದು, ಮಂಗಳವಾರ ಮತ್ತೆ ಎಂಟು ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ. ನಾಲ್ವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಗಳ ಸಾವಿನ ಸರಣಿಯೂ ಮುಂದುವರಿದಿದೆ.
ಅರಳಗೋಡು ಸುತ್ತಮುತ್ತಲಿನ 8 ಜನ ಜ್ವರಪೀಡಿತರಾಗಿದ್ದು, ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಇವರಲ್ಲಿ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲದೆ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀನಗರದ ರಾಮಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕೆಎಂಸಿಗೆ ದಾಖಲಿಸಲು ಶಿಫಾರಸು ಮಾಡಲಾಗಿದೆ.
ಹಿರೆನೆಲ್ಲೂರು ಮತ್ತು ಎಂ.ಎಲ್. ಹಳ್ಳಿಗಳಲ್ಲಿ ರಾಮಪ್ಪ ಅವರ ಜಮೀನು ಇದ್ದು, ಒಕ್ಕಲು ಮಾಡಲು ಹೋದಾಗ ಉಣುಗು ಕಚ್ಚಿರಬಹುದೆಂದು ಶಂಕಿಸಲಾಗಿದೆ. ಅವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇನ್ನು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲಾವಿದ ಲಕ್ಷ್ಮೀನಾರಾಯಣ ಸಂಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಅಲ್ಲಿಂದ ಚೇತರಿಸಿಕೊಂಡ ನಾಲ್ವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಶ್ರೀಧರಾಶ್ರಮದ ಬಳಿ ಮೃತ ಮಂಗ: ವರದಪುರದ ಶ್ರೀಧರಾಶ್ರಮದ ಆವರಣದಲ್ಲಿ ಮಂಗಳವಾರ ಮಂಗವೊಂದು ಮೃತಪಟ್ಟಿದ್ದು ಇನ್ನೊಂದು ಮಂಗ ಅಸ್ವಸ್ಥ ಸ್ಥಿತಿಯಲ್ಲಿ ಆಶ್ರಮದ ಗೋಶಾಲೆಯ ಸಮೀಪಕಾಣಿಸಿಕೊಂಡಿದೆ. ಸೋಮವಾರವೇ ಅಸ್ವಸ್ಥ ಸ್ಥಿತಿಯಲ್ಲಿ ಕಂಡಿದ್ದ ಮಂಗ ಮಂಗಳವಾರ ಸತ್ತಿದ್ದು, ಮೇಲ್ನೋಟಕ್ಕೆ ಕೆಎಫ್‌ಡಿ ಶಂಕೆ ವ್ಯಕ್ತವಾಗಿದೆ. ಪಶು ಇಲಾಖೆಯ ಸಹಾ ಯಕ ನಿರ್ದೇಶಕ ಡಾ| ಎನ್.ಎಚ್. ಶ್ರೀಪಾದರಾವ್ ನೇತೃತ್ವದಲ್ಲಿ ಪೋಸ್ಟ್‌ಮಾರ್ಟಂ ನಡೆಸಿ ಅಂಗಾಂಶಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಬೈಂದೂರಲ್ಲಿ ಮತ್ತೆ ಎರಡು ಶವ ಪತ್ತೆ ಬೈಂದೂರಿನ ಮಾರುಕಟ್ಟೆ ಬಳಿ ಮಂಗಳವಾರ ಬೆಳಗ್ಗೆ ಎರಡು ಮಂಗಗಳ ಶವ ದೊರೆತಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಡುಪಿ ಜಿಲ್ಲೆಯ ಗಡಿಭಾಗಗಳಾದ ಶಿರೂರು, ಸಿದ್ದಾಪುರ ಮುಂತಾದ ಕಡೆ ಮಂಗಗಳ ಕಾಯಿಲೆ ಇರುವುದು ಈಗಾಗಲೇ ಆರೋಗ್ಯ ಇಲಾಖೆಯಿಂದ ದೃಢಪಟ್ಟಿದೆ.
ಡಿಎಚ್‌ಒ, ಉಪ ನಿರ್ದೇಶಕ ಅಮಾನತು
ಶಿವಮೊಗ್ಗ: ಮಂಗನ ಕಾಯಿಲೆ (ಕೆಎಫ್‌ಡಿ) ಹರಡದಂತೆ ಮುಂಜಾಗ್ರತೆ ವಹಿಸುವಲ್ಲಿ ವಿಫಲರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ (ಡಿಎಚ್‌ಒ) ಡಾ| ಬಿ.ಸಿ.ವೆಂಕಟೇಶ್ ಮತ್ತು ಪರಿಮಾಣ ಕ್ರಿಮಿ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಡಾ| ರವಿಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಅವರು ಕರ್ತವ್ಯ ಲೋಪ ಆರೋಪದಡಿ ಇವರಿಬ್ಬರನ್ನೂ ಅಮಾನತುಗೊಳಿಸಿ ಮಂಗಳವಾರ ಆದೇಶ
ಹೊರಡಿಸಿದ್ದಾರೆ.