ಚತ್ತೀಸ್ ಗಢ: ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಒಂಬತ್ತು ಮಂದಿ ನಕ್ಸಲೀಯರು ಸಾವನ್ನಪ್ಪಿರುವ ಘಟನೆ ಮಂಗಳವಾರ (ಸೆ.03) ದಾಂತೇವಾಡಾದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಂತೇವಾಡ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿಯಲ್ಲಿ ನಕ್ಸಲೀಯರು ಠಿಕಾಣಿ ಹೂಡಿದ್ದಾರೆಂಬ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಭದ್ರತಾ ಪಡೆ ಸಿಬಂದಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಶೋಧ ಕಾರ್ಯ ನಡೆಸುತ್ತಿದ್ದ ವೇಳೆಯಲ್ಲಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (PLGA) ಸಂಘಟನೆಯ ನಕ್ಸಲೀಯರ ಗುಂಪು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ದಾಳಿ ನಡೆಸಿದ್ದು, 9 ಮಂದಿ ನಕ್ಸಲೀಯರು ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ ನಕ್ಸಲೀಯರ ಶವ ಹಾಗೂ ಶಸ್ತ್ರಾಸ್ತ್ರ, 303 ರೈಫಲ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಎನ್ ಕೌಂಟರ್ ನಲ್ಲಿ ಯಾವ ಭದ್ರತಾ ಸಿಬಂದಿಯೂ ಗಾಯಗೊಂಡಿಲ್ಲ ಎಂದು ವರದಿ ತಿಳಿಸಿದೆ.