Advertisement

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 9 ಚಿತ್ರಗಳು ತೆರೆಗೆ 

08:51 AM Dec 16, 2022 | Team Udayavani |

ಸ್ಯಾಂಡಲ್‌ವುಡ್‌ನಲ್ಲಿ ಈ ವಾರ 9 ಚಿತ್ರಗಳು ಬಿಡುಗಡೆಆಗುತ್ತಿವೆ. ಆ ಚಿತ್ರಗಳ ಕುರಿತು ಒಂದು ಕಿರುನೋಟ..

Advertisement

ಟೆಂಪರ್‌

ಟೆಂಪರ್‌ ಎಂಬ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಮಂಜುಕವಿ ಟೆಂಪರ್‌ ಚಿತ್ರದ ನಿರ್ದೇಶಕರು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್‌ ಲವ್‌ ಸ್ಟೋರಿ ಒಳಗೊಂಡ “ಟೆಂಪರ್‌’ ಚಿತ್ರವನ್ನು ಶ್ರೀಬಾಲಾಜಿ ಎಂಟರ್‌ ಪ್ರೈಸಸ್‌ ಬ್ಯಾನರ್‌ನಡಿ ಮೋಹನ್‌ ಬಾಬು ಬಿ. ಹಾಗೂ ವಿ. ವಿನೋದ್‌ ಕುಮಾರ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಆರ್ಯನ್‌ ಸೂರ್ಯ ಹಾಗೂ ಕಾಶಿಮಾ ಮೊದಲ ಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದು, ಧನು ಯಲಗಚ್‌ ಹಾಗೂ ಮಜಾಟಾಕೀಸ್‌ ಪವನ್‌ ಕುಮಾರ್‌ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ, ಟೆನ್ನಿಸ್‌ ಕೃಷ್ಣ, ಊರಗೌಡನಾಗಿ ಬಲ ರಾಜವಾಡಿ, ಯತಿರಾಜ್‌ ನಂದಿನಿ ವಿಠಲ, ಪ್ರಿಯ ತರುಣ್‌, ಸನತ್‌ ವಿನೋದ್‌ ಮಿಥಾಲಿ ಶಶಿ ಹಾಗೂ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ರಾಕ್ಷಸರು

ಸಾಯಿಕುಮಾರ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಾಕ್ಷಸರು’ ಚಿತ್ರ ತೆರೆಗೆ ಬರುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ “ರಾಕ್ಷಸರು’ ಸಿನಿಮಾವನ್ನು “ಗರುಡಾದ್ರಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ರಮೇಶ್‌ ಕಶ್ಯಪ್‌ ನಿರ್ಮಾಣ ಮಾಡಿರುವ “ರಾಕ್ಷಸರು’ ಸಿನಿಮಾಕ್ಕೆ ರಜತ್‌ ನಿರ್ದೇಶನವಿದೆ. ಐವರು ಕ್ರಿಮಿನಲ್‌ಗ‌ಳು ಕ್ರೈಂ ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಸಿನಿಮಾದ ಕಥೆಯ ಒಂದು ಎಳೆ. ಪೊಲೀಸರ ಸಾಹಸಗಾಥೆ ಈ ಸಿನಿಮಾದಲ್ಲಿದೆ ಎಂಬುದು ತಂಡದ ಮಾತು

Advertisement

ಶಂಭೋ ಶಿವ ಶಂಕರ

ಅಘನ್ಯ ಪಿಕ್ಚರ್ ಮೂಲಕ ವರ್ತೂರು ಮಂಜು ಈ ಚಿತ್ರವನ್ನು ನಿರ್ಮಿಸುತ್ತಿರುವ “ಶಂಭೋ ಶಿವ ಶಂಕರ’ ಚಿತ್ರವನ್ನು ಶಂಕರ್‌ ಕೋನಮಾನಹಳ್ಳಿ ನಿರ್ದೇಶಿಸಿ ದ್ದಾರೆ. ಈ ಚಿತ್ರದಲ್ಲಿ ಅಭಯ್‌ ಪುನೀತ್‌ ನಾಯಕರಾಗಿ ನಟಿಸಿದ್ದಾರೆ. ಇವರಿಗೆ ಸೋನಾಲ್‌ ಮೊಂತೆರೋ ನಾಯಕಿ. ಇದು ಮೂವರು ಹುಡುಗರ ಸುತ್ತ ನಡೆಯುವ ಕಥೆ. ನಾಯಕ ಹಾಗೂ ಆತನ ಇಬ್ಬರು ಸ್ನೇಹಿತರ ಸುತ್ತ ನಡೆಯುವ ಕಥೆಯಾಗಿದ್ದು, ಆ ಮೂವರು ಹುಡುಗರ ಹೆಸರನ್ನೇ ಚಿತ್ರದ ಟೈಟಲ್‌ ಆಗಿ ಇಡಲಾಗಿದೆ. ನಾಯಕ ಅಭಯ್‌ ಜೊತೆ ರೋಹಿತ್‌ ಹಾಗೂ ರಕ್ಷಕ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಲಿಪ್‌ಸ್ಟಿಕ್‌ ಮರ್ಡರ್‌

“ಲಿಪ್‌ಸ್ಟಿಕ್‌ ಮರ್ಡರ್‌’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇಂದು ಬಿಡುಗಡೆಯಾಗುತ್ತಿದೆ. ಕ್ರೈಮ್‌ ಥ್ರಿಲ್ಲರ್‌ ಕಥಾಹಂದರವೊಂದಿರುವ ಈ ಚಿತ್ರವನ್ನು ರಾಜೇಶ್‌ ಮೂರ್ತಿ ನಿರ್ದೇಶಿಸಿದ್ದಾರೆ. ಬಿ.ಎಸ್‌. ಮಂಜುನಾಥ್‌ ಹಾಗೂ ರಾಜೇಶ್‌ ಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ ಮೂಲಕ ಯುವಕರು ಯಾವ ರೀತಿ ಮೋಸ ಹೋಗುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳಲಾಗಿದೆಯಂತೆ. ಈ ಚಿತ್ರದ ಕಥೆಯಲ್ಲಿ ಡೇಟಿಂಗ್‌ ಆ್ಯಪ್‌ ನಂಬಿ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಮರ್ಡರ್‌ ಆಗುವ ಕಥೆಯಿದೆ. ಚಿತ್ರದಲ್ಲಿ ಆರ್ಯನ್‌ ರಾಜ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ ಮೂಲದ ಅಲೆಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್‌ ಮಿಶ್ರಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಟೆನ್‌

ವಿನಯ್‌ ರಾಜ್‌ಕುಮಾರ್‌ ನಟನೆಯ “ಟೆನ್‌’ ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದೆ. ಈ ಚಿತ್ರವನ್ನು ಕರಮ್‌ ಚಾವ್ಲಾ ನಿರ್ದೇಶಿಸಿದ್ದು, ಪುಷ್ಕರ್‌ ನಿರ್ಮಿಸಿದ್ದಾರೆ. ಅನುಷಾ ಈ ಚಿತ್ರದ ನಾಯಕಿ. ಚಿತ್ರದಲ್ಲಿ ವಿನಯ್‌ ಬಾಕ್ಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಮೊದಲ ಮಿಡಿತ

ಹರಿಚೇತ್‌ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ, ನಿಮೀಶ್‌ ಸಾಗರ್‌, ರಶ್ಮಿರಾ ರೋಜಾ ಅಭಿನಯದ “ಮೊದಲ ಮಿಡಿತ’ ಚಿತ್ರ ಇಂದು ತೆರೆಕಾಣುತ್ತಿದೆ. “ಚಿತ್ರದಲ್ಲಿ ನಾಲ್ಕು ಫೈಟ್‌, ನಾಲ್ಕು ಹಾಡುಗಳಿದ್ದು, ಮನ ಮಿಡಿಯುವ ಪ್ರೇಮಕಥೆ, ತಂದೆ ಮಗನ ಬಾಂಧ್ಯವ್ಯ, ತಾಯಿ ಮಗನ ಮಮಕಾರ, ಹಾಸ್ಯದ ಸಿಂಚನ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಿದೆ’ ಎನ್ನುವುದು ನಿರ್ದೇಶಕರು ಮಾತು. ನಾಯಕ ನಿಮೀಶ್‌ ಸಾಗರ್‌, ರಾಹುಲ್‌ ಎಂಬ ಶ್ರೀಮಂತ ಮನೆತನದ ಹುಡುಗನಾಗಿ ನಟಿಸಿದ್ದಾರಂತೆ. ಚಿತ್ರವನ್ನು ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್‌ ನಿರ್ಮಿಸಿದ್ದಾರೆ.

ನೇಗಿಲ ಒಡೆಯ

“ಸೂರ್ಯೋದಯ ಮೂವೀಸ್‌’ ಲಾಂಛನದಲ್ಲಿ ನಾಗಳ್ಳಿ ಅನಂತ ರತ್ನಮ್ಮ ನಿರ್ಮಿಸಿರುವ “ನೇಗಿಲ ಒಡೆಯ’ ಚಿತ್ರ ತೆರೆಕಾಣುತ್ತಿದೆ. ಸಾಮಾನ್ಯ ರೈತನೊಬ್ಬ ವಿಶ್ವಮಟ್ಟದಲ್ಲಿ ಸಾಧನೆ ಮಾಡುವ, ಲವ್‌ ಕಂ ಸೆಂಟಿಮೆಂಟ್‌ ಜೊತೆಗೆ ರೈತಪರ ಮತ್ತು ವಿದ್ಯಾರ್ಥಿಗಳಿಗೆ ಸಂದೇಶವಿರುವ ಈ ಚಿತ್ರವನ್ನು ಎನ್‌. ಕೃಷ್ಣ ಮೋಹನ್‌ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

“ನೇಗಿಲ ಒಡೆಯ’ ಸಿನಿಮಾದ ಹಾಡುಗಳಿಗೆ ವಿಕ್ಟರಿ ಡ್ಯಾನಿಯಲ್‌ ಸಂಗೀತ ಸಂಯೋಜನೆಯಿದೆ. ಹಾಡುಗಳಿಗೆ ಹೇಮಂತರಾಜು, ಮಂಜು, ಸಿ. ಎನ್‌ ಮೂರ್ತಿ ಸಾಹಿತ್ಯ ಒದಗಿಸಿದ್ದಾರೆ. ನಿತಿನ್‌ ರಾಜ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಎಸ್‌.ಬಾಲು ಛಾಯಾಗ್ರಹಣ, ಅನಿಲ್‌ ಚಿನ್ನು ಸಂಕಲನವಿದೆ. ಇದರ ಜೊತೆಗೆ “ಯು ಟರ್ನ್ 2′ ಹಾಗೂ “ನಿಂಗ’ ಚಿತ್ರಗಳು ಕೂಡಾ ಈ ವಾರ ತೆರೆಕಾಣುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next