Advertisement

ಕಲ್ಮಕಾರಿನಲ್ಲಿ 9 ಕುಟುಂಬಕ್ಕೆ ನಿವೇಶನ: ತಹಶೀಲ್ದಾರ್‌

10:29 AM Apr 19, 2022 | Team Udayavani |

ಸುಳ್ಯ: ಸುಳ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ನಿವಾರಣ ಸಮಿತಿ ಸಭೆ ಸುಳ್ಯ ತಹಶೀಲ್ದಾರ್‌ ಅನಿತಾಲಕ್ಷ್ಮೀ ಅಧ್ಯಕ್ಷತೆಯಲ್ಲಿ ಸೋಮವಾರ ಸುಳ್ಯ ತಾ.ಪಂ.ಸಭಾಂಗಣದಲ್ಲಿ ನಡೆಯಿತು.

Advertisement

ಕಲ್ಮಕಾರು ಗ್ರಾಮದ ಗುಳಿಕಾನ ಎಂಬಲ್ಲಿ ಪ್ರಕೃತಿ ವಿಕೋಪದಿಂದ ಗುಡ್ಡಕುಸಿತದಿಂದ ಅಪಾಯದಲ್ಲಿರುವ 9 ಕುಟುಂಬಗಳಿಗೆ ಕಂದಾಯ ಇಲಾಖೆ ಇನ್ನೂ ನಿವೇಶನ ನೀಡದಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಈ ಹಿಂದೆ ಅವರಿಗೆ ನೀಡಲು ಗುರುತಿಸಿದ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದಾದರೆ ಬದಲಿ ಪರಿಹಾರ ಏನು ಎಂದು ವಸಂತ ಕುದ್ಪಾಜೆ ಅವರು ಪ್ರಶ್ನಿಸಿದರು. ಉತ್ತರಿಸಿದ ತಹಶೀಲ್ದಾರ್‌ ಅನಿತಾಲಕ್ಷ್ಮೀ ಅವರು, ಈಗ ಇನ್ನೊಂದು ಕಡೆ ಬದಲಿ ಜಾಗ ಗುರುತಿಸಲಾಗಿದೆ. ಅದನ್ನು ಸಹಾಯಕ ಆಯುಕ್ತರಿಗೆ ವರದಿ ಮಾಡಲಾಗಿದೆ ಎಂದರು. ಎರಡು ವರ್ಷಗಳಿಂದ ಜಾಗ ನೀಡಲು ಸಾಧ್ಯವಾಗಿಲ್ಲ ಎಂದರೆ ಇಲಾಖೆ ಏನು ಮಾಡುತ್ತಿದೆ ಎಂದು ವಸಂತ್‌ ಕುದ್ಪಾಜೆ, ಇತರರು ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ನಿವೇಶನ ನೀಡುವ ಕಾರ್ಯವಾಗುತ್ತದೆ ಎಂದು ತಹಶೀಲ್ದಾರ್‌ ತಿಳಿಸಿದರು.

ಸುಳ್ಯದಲ್ಲಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಬೇಕು ಎಂದು 2015ರಿಂದಲೇ ಒತ್ತಾಯಿಸುತ್ತಿದ್ದೇವೆ. ಅಂದಿನ ತಹಶೀಲ್ದಾರ್‌ ಅವರು ತಾಲೂಕು ಕಚೇರಿ ಎದುರು ಅಂಬೇಡ್ಕರ್‌ ಪ್ರತಿಮೆ ನಿರ್ಮಿಸುವ ಭರವಸೆ ನೀಡಿದ್ದರು ಎಂದು ಆನಂದ ಬೆಳ್ಳಾರೆ ಅವರು ಪ್ರಸ್ತಾವಿಸಿದರು. ಈ ಬಗ್ಗೆ ನಗರ ಪಂಚಾಯತ್‌ ಸಭೆಯಲ್ಲಿ ಚರ್ಚಿಸುವುದಾಗಿ ನ.ಪಂ.ಮುಖ್ಯಾಧಿಕಾರಿ ಎಂ.ಆರ್‌.ಸ್ವಾಮಿ ಅವರು ಉತ್ತರಿಸಿದರು. ಮುಂದಿನ ಸಭೆಯ ವೇಳೆಗೆ ರೂಪುರೇಷೆ ತಯಾರಿಸುವಂತೆ ತಹಶೀಲ್ದಾರ್‌ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಅಸ್ಪೃಶ್ಯತೆ ಜೀವಂತ ಆರೋಪ

Advertisement

ಗುತ್ತಿಗಾರಿನ ಆಶಾ ಕಾರ್ಯಕರ್ತೆಯೊಬ್ಬರ ಕುರಿತು ಆರೋಗ್ಯಾಧಿಕಾರಿ ನೀಡಿರುವ ವರದಿಯ ಕುರಿತು ಸಭೆಯಲ್ಲಿ ಅಚ್ಯುತ ಮಲ್ಕಜೆ ಪ್ರಸ್ತಾವಿಸಿದರು. ಅವರು ದಲಿತ ಎಂಬ ಕಾರಣಕ್ಕೆ ಆಶಾಕಾರ್ಯಕರ್ತೆಯಾಗಿ ಮುಂದುವರಿಯಲು ಅವಕಾಶ ನಿರಾಕರಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಸ್ಪೃಶ್ಯತೆ ಈಗಲೂ ಜೀವಂತ ಇದೆ ಎಂದು ಆನಂದ ಬೆಳ್ಳಾರೆ ತಿಳಿಸಿದರು.

ವಿಚಾರದ ಗಂಭಿರತೆ ಅರಿತ ತಹಶೀಲ್ದಾರ್‌ ಅವರು ವೈದ್ಯಾಧಿಕಾರಿಗಳಲ್ಲಿ ಮಾಹಿತಿ ಕೇಳಿದರು. ಅವರು ದೀರ್ಘ‌ ರಜೆ ಹಾಕಿರುವುದರಿಂದ ವರದಿ ನೀಡಲಾಗಿದೆ. ಈಗ ಅವರು ಬೇರೆ ಕೆಲಸಕ್ಕೂ ಹೋಗುತ್ತಿದ್ದಾರೆ. ಈ ಬಗ್ಗೆ ಸಭೆ ನಡೆಸುತ್ತೇವೆ ಎಂದು ಡಾ| ನಂದಕುಮಾರ್‌ ತಿಳಿಸಿದರು. ಈ ಕುರಿತು ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವಂತೆ ಇಒ ಭವಾನಿಶಂಕರ್‌ ಸಲಹೆ ನೀಡಿದರು. ಸಮಾಜ ಕಲ್ಯಾಣಾಧಿಕಾರಿ ಹೇಮಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

ಭೂ ಪರಿವರ್ತನೆ ಸಮಸ್ಯೆ

ಈಗ ಭೂ ಪರಿವರ್ತನೆ ಆಗದೆ ಎಸ್‌ಸಿ ಎಸ್‌ಟಿ ಅವರಿಗೆ ಮನೆಕಟ್ಟಲು ಅನುಮತಿ ಸಿಗುತ್ತಿಲ್ಲ ಇದನ್ನು ಸರಿಪಡಿಸಬೇಕೆಂದು ನಂದರಾಜ್‌ ಸಂಕೇಶ್‌, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ 9 ಕುಟುಂಬಗಳು 94ಸಿಯಲ್ಲಿ ಹಕ್ಕುಪತ್ರಕ್ಕಾಗಿ 7 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಹಕ್ಕುಪತ್ರ ಸಿಕಿಲ್ಲ ಎಂದು ಅಚ್ಯುತ್ತ ಗುತ್ತಿಗಾರು ತಿಳಿಸಿದರು. ಸುಳ್ಯದ ಎಸ್‌ಸಿ ಎಸ್‌ಟಿ ವಿದ್ಯಾರ್ಥಿನಿ ನಿಲಯಗಳಿಗೆ ಸಿಸಿ ಕೆಮರಾ ಅಳವಡಿಸಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next