ಉತ್ತರಪ್ರದೇಶ: ಟ್ರ್ಯಾಕ್ಟರ್ ಟ್ರಾಲಿಯೊಂದು ನದಿಗೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 50 ಭಕ್ತರನ್ನು ಹೊತ್ತ ಟ್ರಾಕ್ಟರ್ ಧಾರ್ಮಿಕ ಕಾರ್ಯಕ್ರಮಕ್ಕಾಗಿ ರಾಂಡೌಲ್ ಗ್ರಾಮಕ್ಕೆ ತೆರಳುತ್ತಿದ್ದಾಗ ತಾಜಪುರ ಪ್ರದೇಶ ಪ್ರವೇಶಿಸುತ್ತಿದ್ದಂತೆ ಬುಧವಾರ ಸಂಜೆ ನದಿಗೆ ಉರುಳಿ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಮನ್ಯು ಮಾಂಗ್ಲಿಕ್ ಪಿಟಿಐಗೆ ತಿಳಿಸಿದ್ದಾರೆ.
ಬುಧವಾರ ಪೊಲೀಸರು ನಾಲ್ವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಮೃತರನ್ನು ಸುಲೋಚನಾ (58), ಮಂಗಳೇಶ್ (50) ಮತ್ತು ಐದು ಮತ್ತು 12 ವರ್ಷದ ಅದಿತಿ ಮತ್ತು ಅರ್ಜುನ್ ಎಂದು ಗುರುತಿಸಲಾಗಿದೆ. ಇಂದು ಪತ್ತೆಯಾದ ಐದು ಶವಗಳ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಪರಿಣಾಮ ಕೆಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ಇದ್ದು ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಹರಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ದಿನೇಶ್ ಚಂದ್ ಮತ್ತು ಎಸ್‌ಎಸ್‌ಪಿ ಡಾ.ವಿಪಿನ್ ತಾಡಾ ಭೇಟಿ ನೀಡಿದ್ದು, ಈ ಮಾರ್ಗದಲ್ಲಿ ತೆರಳದಂತೆ ಗ್ರಾಮಸ್ಥರಿಗೆ ತಿಳಿಸಿದ್ದರೂ ಚಾಲಕನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ ಎಂದು ತಾಡಾ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Chandrayan-3; ಪ್ರಧಾನಿ ಇಸ್ರೋ ಭೇಟಿಗೆ ರಾಜಕೀಯ ಮಾತನಾಡಲಾರೆ: ಸಚಿವ ಎಂ.ಬಿ.ಪಾಟೀಲ