ನವೆದಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿಯುಳಿದಿವೆ. ಇದರಲ್ಲಿ ರೈಲ್ವೆ, ಗೃಹ, ರಕ್ಷಣಾ (ನಾಗರಿಕ ವಿಭಾಗ) ಸಚಿವಾಲಯ ಸೇರಿ ಒಟ್ಟು ಐದು ಇಲಾಖೆಗಳದ್ದೇ ಪ್ರಮುಖ ಪಾತ್ರ. ಇಲ್ಲೇ ಶೇ.90 ಹುದ್ದೆಗಳು ಖಾಲಿಯಿವೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ದಾಖಲೆಗಳು ಹೇಳಿವೆ.
2021, ಮಾ.1ರ ದಾಖಲೆಗಳ ಪ್ರಕಾರ ಕೇಂದ್ರ ಸರ್ಕಾರದಲ್ಲಿ 9,79,327 ಹುದ್ದೆಗಳು ಖಾಲಿಯಿವೆ. ರೈಲ್ವೇಯಲ್ಲಿ ಗರಿಷ್ಠ 2.93 ಲಕ್ಷ ಹುದ್ದೆಗಳಿಗೆ ನೇಮಕಾತಿಯಾಗಿಲ್ಲ. ಈ ಇಲಾಖೆ ದೇಶದಲ್ಲೇ ಗರಿಷ್ಠ ನೇಮಕಾತಿ ಮಾಡಿಕೊಳ್ಳುತ್ತದೆ ಎನ್ನುವುದು ಗಮನಾರ್ಹ.
ಇನ್ನು ರಕ್ಷಣಾ ಇಲಾಖೆಯಲ್ಲಿ 2.64 ಲಕ್ಷ ಹುದ್ದೆಗಳು, ಗೃಹ ಸಚಿವಾಲಯದಲ್ಲಿ 1.43 ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ. ಇನ್ನು ಅಂಚೆ ಇಲಾಖೆಯಲ್ಲಿ 90,050, ಕಂದಾಯ ಇಲಾಖೆಯಲ್ಲಿ 80,243 ಹುದ್ದೆಗಳು ಖಾಲಿಯಿವೆ. ಇನ್ನು ರಾಷ್ಟ್ರಪತಿ ಕಚೇರಿಯಲ್ಲಿ 91, ಪ್ರಧಾನಿ ಕಚೇರಿಯಲ್ಲಿ 129 ಹುದ್ದೆಗಳು ಭರ್ತಿಯಾಗಬೇಕಿದೆ!
ಒಟ್ಟು ಖಾಲಿಯಿರುವ ಹುದ್ದೆಗಳ ಪೈಕಿ 8.36 ಲಕ್ಷ ಗುಂಪು ಸಿ ವ್ಯಾಪ್ತಿಗೆ ಬರುತ್ತವೆ. 92,525 ಹುದ್ದೆಗಳು ಬಿ ಗುಂಪಿಗೆ (ನಾನ್ ಗೆಜೆಟೆಡ್), ಇದರಲ್ಲೇ ಗೆಜೆಟೆಡ್ ವ್ಯಾಪ್ತಿಯಲ್ಲಿ 26,282 ಹುದ್ದೆಗಳು ಭರ್ತಿಯಾಗಬೇಕಿವೆ. ಇನ್ನು ಎ ಗುಂಪಿಗೆ ಸೇರಿದ 23,584 ಹುದ್ದೆಗಳು ಖಾಲಿಯಿವೆ.