Advertisement
2019ರ ಆಗಸ್ಟ್‌ನಲ್ಲಿ ಲಭ್ಯವಾಗಿದ್ದ ಚಿತ್ರದಲ್ಲಿ ಸಣ್ಣ ರೀತಿಯ ಸುರಂಗ ಕೊರೆದದ್ದು ಪತ್ತೆಯಾಗಿತ್ತು. ಮೆರ್ಗು ಲಾ ಪಾಸ್ ಮೂಲಕ ಉತ್ತರ ಭಾಗಗಳಿಗೆ ತೆರಳುವ ರಸ್ತೆಗೆ ರಕ್ಷಣೆ ನೀಡಲು ಅದನ್ನು ರಚಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಅದೇ ಟನೆಲ್ ಬಗ್ಗೆ ಹೊಸ ಫೋಟೋಗಳನ್ನು ಗಮನಿಸಿದಾಗ 500 ಮೀಟರ್‌ನಷ್ಟು ಮುಂದಕ್ಕೆ ಕಾಮಗಾರಿಯಲ್ಲಿ ಪ್ರಗತಿಯಾದದ್ದು ದೃಢಪಟ್ಟಿತ್ತು. ದೋಕ್ಲಾಂಗೆ ಸರ್ವ ಋತು ದಾರಿಯನ್ನು ನಿರ್ಮಾಣ ಮಾಡುವುದೇ ಈ ಟನೆಲ್ ನಿರ್ಮಾಣದ ಉದ್ದೇಶ ಎಂದು ರಕ್ಷಣಾ ಕ್ಷೇತ್ರದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚಳಿಗಾಲದಲ್ಲಿ ದೋಕ್ಲಾಂಗೆ ಹೋಗಲು ಅಸಾಧ್ಯ. ಆ ಸ್ಥಳದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಈ ಕಾಮಗಾರಿ ನಡೆದಿದೆ. ಕೇಂದ್ರ ಸರಕಾರ ಚೀನ ಜತೆಗಿನ ಬಿಗುವಿನ ವಾತಾವರಣವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸುತ್ತಿರುವಂತೆಯೇ ಈ ಹೊಸ ಬೆಳವಣಿಗೆ ವರದಿಯಾಗಿದೆ.
ಮಿತ್ರ ರಾಷ್ಟ್ರ ಫಿಲಿಪ್ಪೀನ್ಸ್‌ಗೆ ಭಾರತ ಕೋಸ್ಟಲ್ ಸರ್ವೇಲೆನ್ಸ್ ರಾಡಾರ್ ಸಿಸ್ಟಂ(ಕರಾವಳಿ ಕಣ್ಗಾವಲು ರಾಡಾರ್ ವ್ಯವಸ್ಥೆ) ಒದಗಿಸಲು ಮನಸ್ಸು ಮಾಡಿದೆ. ಈ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರು ಫಿಲಿಪಿನ್ಸ್ ಆಡಳಿತದೊಂದಿಗೆ ವರ್ಚುವಲ್ ಸಭೆ ನಡೆಸಿದ್ದಾರೆ. ಈ ರಾಡಾರ್ ವ್ಯವಸ್ಥೆಯಿಂದಾಗಿ ಇನ್ಮುಂದೆ ಫಿಲಿಪ್ಪೀನ್ಸ್‌ಗೆ ಸಾಗರ ಭಾಗದಲ್ಲಿ ಚೀನದ ಚಲನವಲನಗಳ ಮೇಲೆ ಹದ್ದಿನಗಣ್ಣಿಡಲು ಸಾಧ್ಯವಾಗಲಿದೆ.ದಕ್ಷಿಣ ಚೀನ ಸಮುದ್ರದಲ್ಲಿ ದಶಕಗಳಿಂದ ಫಿಲಿಪ್ಪೀನ್ಸ್ ಮತ್ತು ಚೀನ ನಡುವೆ ಬಿಕ್ಕಟ್ಟು ಮುಂದುವರಿದೇ ಇದೆ. ಈ ಕಾರಣಕ್ಕಾಗಿಯೇ, ಭಾರತದ ಈ ನಿರ್ಣಯ ನಿಸ್ಸಂಶಯವಾಗಿಯೂ ಮಾಸ್ಟರ್‌ಸ್ಟ್ರೋಕ್ ಆಗಿ ಬದಲಾಗಲಿದೆ ಎನ್ನುವುದು ರಕ್ಷಣಾ ಪರಿಣತರ ಅಭಿಪ್ರಾಯ. ಭಾರತವೆಂದಷ್ಟೇ ಅಲ್ಲ, ಆಗಸ್ಟ್ ತಿಂಗಳಲ್ಲಿ ಜಪಾನ್ ಸಹ ಫಿಲಿಪ್ಪೀನ್ಸ್‌ಗೆ ಬಹುಆಯಾಮದ ರಾಡಾರ್ ವ್ಯವಸ್ಥೆಯನ್ನು ಒದಗಿಸಿತ್ತು.