ಧಾರವಾಡ: ಮಹಾರಾಷ್ಟದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಆವರಣದಲ್ಲಿ ಕವಿಸಂ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅಖೀಲ ಭಾರತ ಹೊರನಾಡು ಕನ್ನಡ ಸಂಘಗಳ 8ನೇ ಮಹಾಮೇಳವನ್ನು ಡಿ.21, 22ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ಕಲಕೋಟದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಆದರ್ಶ ಕನ್ನಡ ಬಳಗ ಸೇರಿ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಮಹಾಮೇಳ ಆಯೋಜಿಸಲಾಗಿದೆ. ಡಿ.21ರ ಬೆಳಗ್ಗೆ 9ಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿದ ಬಳಿಕ ಮೆರವಣಿಗೆ ನಡೆಯಲಿದೆ. 10:30ಕ್ಕೆ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯರಾಜೆ ವಿಜಯಸಿಂಹರಾಜೆ ಭೋಸಲೆ ಮಹಾರಾಜರು ಮೇಳ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಮಾಜಿ ಶಾಸಕ ವೈ.ಎಸ್.ವಿ.ದತ್ತಾ , ರಂಜಾನ್ ದರ್ಗಾ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕವಿಸಂ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡು-ನುಡಿಗೆ ಶ್ರಮಿಸಿದ ಮಹನೀಯರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.
ಶಾಂತಲಿಂಗ ಶ್ರೀ ಚಾಲನೆ: ಮಧ್ಯಾಹ್ನ 2.30ಕ್ಕೆ ಗೋಷ್ಠಿಗಳಿಗೆ ಬೈರನಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಶಾಂತೇಶ ಗಾಮನಗಟ್ಟಿ ಆಶಯ ನುಡಿಗಳನ್ನಾಡಲಿದ್ದು, ಡಾ.ಶಾಂತಿನಾಥ ದಿಬ್ಬದ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. 3.30ಕ್ಕೆ ಕನ್ನಡ-ಮರಾಠಿ ಸಂಸ್ಕೃತಿ ವಿಷಯ ಕುರಿತು ಮೊದಲ ಗೋಷ್ಠಿ ನಡೆಯಲಿದ್ದು, ಸಂಶೋಧಕಿ ಹನುಮಾಕ್ಷಿ ಗೋಗಿ ಸೇರಿ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿದ್ದಾರೆ. ಬಳಿಕ ಹೊರನಾಡು-ಗಡಿನಾಡ ಕನ್ನಡಿಗರ ಸಮಸ್ಯೆ ಮತ್ತು ಪರಿಹಾರ ವಿಷಯವಾಗಿ 2ನೇ ಗೋಷ್ಠಿ ನಡೆಯಲಿದ್ದು, ಸಂಜೆ 6.30ಕ್ಕೆ ವೆಂಕಟೇಶ ದೇಸಾಯಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಡಾ.ಶಂಭು ಬಳಿಗಾರರಿಂದ ನಗೆಹಬ್ಬ ಮುಗಿದ ಬಳಿಕ ಜಾಳಪೋಳ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
2 ದಿನದಲ್ಲಿ 6 ಗೋಷ್ಠಿ: ಕಾವ್ಯ ಬೆಳಗು, ಹೊರನಾಡ ಪ್ರತಿನಿಧಿಗಳ ಅಧಿವೇಶನ, ಹೊರನಾಡು-ಗಡಿನಾಡು: ಕನ್ನಡ ಸಮೂಹ ಮಾಧ್ಯಮ, ಕನ್ನಡ-ಮರಾಠಿ: ಭಾಷಾ ಬಾಂಧವ್ಯ, ಕನ್ನಡ-ಮರಾಠಿ ಸಾಂಸ್ಕೃತಿಕ ಸಂಬಂಧಗಳು ವಿಷಯ ಸೇರಿ 2 ದಿನದ ಮೇಳದಲ್ಲಿ ಒಟ್ಟು 6 ಗೋಷ್ಠಿ ಜರುಗಲಿವೆ. ಡಿ.22ರಂದು 4.30ಕ್ಕೆ ನಡೆಯುವ ಸಮಾರೋಪದ ಸಾನ್ನಿಧ್ಯವನ್ನು ಇಳಕಲ್ ಗುರುಮಹಾಂತ ಸ್ವಾಮೀಜಿ, ಬಾಲಗಾಂವ ಜ್ಞಾನಯೋಗಾಶ್ರಮದ ಅಮೃತಾನಂದ ಸ್ವಾಮೀಜಿ ವಹಿಸಲಿದ್ದಾರೆ.
ಡಾ.ಕೆ.ಆರ್.ದುರ್ಗಾದಾಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಹೊರನಾಡು ಕನ್ನಡಿಗರ ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು. ಕವಿಸಂ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ, ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ, ಸದಾನಂದ ಶಿವಳ್ಳಿ, ಶಂಕರ ಕುಂಬಿ, ಚೈತ್ರಾ ನಾಗಮ್ಮನವರ, ವಿಶ್ವೇಶ್ವರಿ ಹಿರೇಮಠ ಇದ್ದರು.