ಸೊಲ್ಲಾಪುರ, ಡಿ. 20: ಅಕ್ಕಲ್‌ಕೋಟೆಯ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಆವರಣದಲ್ಲಿ ನಾಡಿನ ಪ್ರಾತಿನಿಧಿಕ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲ್ ಕೋಟೆ ಮತ್ತು ಅಕ್ಕಲ್‌ಕೋಟೆಯ ಎಲ್ಲ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಡಿ. 21 ಮತ್ತು 22ರಂದು ಎರಡು ದಿನಗಳ ಕಾಲ “”ಅಖೀಲ ಭಾರತ ಹೊರನಾಡ ಕನ್ನಡ ಸಂಘಗಳ 8ನೇ ಮಹಾಮೇಳ” ಹಮ್ಮಿಕೊಳ್ಳಲಾಗಿದ್ದು, ಭರದ ಸಿದ್ಧತೆ ನಡೆಯುತ್ತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ತಿಳಿಸಿದ್ದಾರೆ.
ಡಿ. 19ರಂದು ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 21ರಂದು ಬೆಳಗ್ಗೆ 9ಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಬಳಿಕ ಸಕಲ ವಾದ್ಯ ಮೇಳ ಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10.30 ರಿಂದ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಅಕ್ಕಲ್ ಕೋಟೆಯ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ ಅವರು ಚಾಲನೆ ನೀಡಲಿದ್ದಾರೆ.
ನಾಡಿನ ಹಿರಿಯ ಚೇತನ, ಸಾಹಿತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶತಾಯು ನಾಡೋಜ ಡಾ| ಪಾಟೀಲ ಪುಟ್ಟಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು, ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನಾಡು-ನುಡಿಗಾಗಿ ಶ್ರಮಿಸಿದ ಮಹಾನೀಯರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಬಳಿಕ ವಿವಿಧ ಗೋಷ್ಠಿಗಳಿಗೆ ಬೈರನಟ್ಟಿಯ ದೊರೆಸ್ವಾಮಿ ಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ. ವಿವಿಧ ಸಾಹಿತ್ಯ ಗೋಷ್ಠಿಗಳೊಂದಿಗೆ ಜೊತೆಗೆ ಹೊರನಾಡ ಪ್ರತಿನಿಧಿಗಳ ಅಧಿವೇಶನ, ಹೊರನಾಡು ಕನ್ನಡಿಗರ ಕೃತಿಗಳ ಬಿಡುಗಡೆ, ಕಾವ್ಯ ಬೆಳಗು, ನಗೆಹಬ್ಬ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಡಿ. 22ರಂದು ಸಂಜೆ 4.30ರಿಂದ ಇಳಕಲ್ಲಿನ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಗುರುಮಹಾಂತ ಸ್ವಾಮಿಗಳು ಮತ್ತು ಬಾಲಗಾಂವ್‌ನ ಜ್ಞಾನಯೋಗಾಶ್ರಮದ ಶ್ರೀ ಅಮೃತಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ನಾಡೋಜ ಡಾ| ಪಾಟೀಲ ಪುಟ್ಟಪ್ಪನವರು ವಹಿಸಲಿದ್ದಾರೆ.
ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಯುವಜನ ನಿರ್ದೇಶಕರಾದ ಡಾ| ಕೆ. ಆರ್. ದುರ್ಗಾದಾಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಕನ್ನಡಪರ ಹೋರಾಟಗಾರರು, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಕಾರ್ಯಕಾರಿ ಸಮಿತಿಯ ವಿಶ್ವಸ್ಥ ಅಮೋಲರಾಜೆ ಭೋಸ್ಲೆ ಮತ್ತು ಕರ್ನಾಟಕ
ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಉಪಸ್ಥಿತರಿದ್ದರು.