Advertisement

ವಿತರಣೆಗೆ ಕಾಯುತಿರುವ 898 ಸೈಕಲ್ ಗ‌ಳು !

04:58 AM Dec 29, 2018 | |

ಮೂಡುಬಿದಿರೆ : ವಲಯದ ಶಾಲಾ ವಿದ್ಯಾರ್ಥಿಗಳಿಗೆಂದು ಪಾಡ್ಯಾರು ಶಾಲಾವರಣವೆಂಬ ಮುಕ್ತ ಅಂಗಳದಲ್ಲಿ ಶಿಸ್ತಲ್ಲಿ ಜೋಡಿಸಿಟ್ಟ 898 ಸೈಕಲ್‌ಗ‌ಳನ್ನು ಇನ್ನೂ ವಿತರಿಸಲಾಗಿಲ್ಲ. ಇದಕ್ಕೆ ಕಾರಣ- ಹಲವಾರು.

Advertisement

ಈ ವರ್ಷ ಗುತ್ತಿಗೆದಾರರಿಗೆ ಒಪ್ಪಿಗೆ ಸಿಕ್ಕಿದ್ದು ಕೊಂಚ ತಡವಾಗಿಯೇ ಎಂದೆನ್ನಲಾಗಿದೆ. ಜೋಡಿಸಿದ ಬಳಿಕ ವಿತರಿಸಬೇಕು ಎನ್ನುವಷ್ಟರಲ್ಲಿ ಮೈಸೂರಿನಲ್ಲಿ ವಿತರಿಸಲಾದ ಸೈಕಲ್‌ಗ‌ಳ ಗುಣಮಟ್ಟದ ಬಗ್ಗೆ ಹೆತ್ತವರಿಂದ ದೂರು ಬಂದಿತು. ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಕಡೆಗಳಲ್ಲಿ ವಿತರಣೆಗೆ ಸಿದ್ಧವಾಗಿರುವ ಸೈಕಲ್‌ಗ‌ಳನ್ನು ಪರಿಶೀಲಿಸಿದ ಬಳಿಕವೇ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂಬ ಆದೇಶವಿತ್ತರು. ಅದರಂತೆ, ಶಿಕ್ಷಣ ಇಲಾಖೆಯ ಮೂಲಕ ಪರಿಶೀಲನೆಯ ಪ್ರಾಥಮಿಕ ವರದಿಗಳು ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡೆಲ್‌ ಅಧಿಕಾರಿ ಇವರ ಮೂಲಕ ಉನ್ನತಾಧಿಕಾರಿಗಳಿಗೆ ತಲುಪಿಯಾಗಿದೆ. ಎಲ್ಲ ಕ್ಷೇತ್ರಗಳ ವರದಿಗಳು ವಿಭಾಗಗಳ ಮೂಲಕ ಬೆಂಗಳೂರು ತಲುಪಿಯಾಗಿದೆ. ಇನ್ನು ಅದೇ ‘ರಹದಾರಿ’ಯ ಮೂಲಕ ಅಂತಿಮವಾಗಿ ವಿತರಣೆಯ ಸೂಚನೆ ಬರಬೇಕಾಗಿದೆ. ಇದೆಲ್ಲ ಆಗುವಾಗ ಏನಿಲ್ಲವೆಂದರೂ ಇನ್ನೂ 2 ವಾರ ಕಳೆದೀತು.

ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದೆ. ಇನ್ನೇನಿದ್ದರೂ ಎರಡು ಎರಡೂವರೆ ತಿಂಗಳು ಮಾತ್ರ ಮಕ್ಕಳು ಈ ಸೈಕಲ್‌ ಭಾಗ್ಯವನ್ನು ಅನುಭವಿಸಬಹುದು. ಸೂಕ್ತ ಆವರಣ ಗೋಡೆಯಿಲ್ಲ. ಯಾರೂ ಬರಬಹುದು, ಏನನ್ನೂ ಎತ್ತಿಕೊಂಡು ಹೋಗಬಹುದು ಎಂಬಂಥ ಸ್ಥಿತಿ ಇಲ್ಲಿದೆ. ಸೈಕಲ್‌ ಜೋಡಿಸುವ ಐವರು ಕುಶಲಕರ್ಮಿಗಳು ಧ್ವಜಸ್ತಂಭದ ಬಳಿ ಕಲ್ಲುಗಳನ್ನಿರಿಸಿ ಅಡುಗೆ ಮಾಡಿದ ಕುರುಹು, ಅವಶೇಷಗಳು, ಗುಟ್ಕಾ ಪ್ಯಾಕೆಟ್‌ಗಳು, ಹಳೆಯ ಕಟ್ಟಡ ಸಾಮಗ್ರಿಗಳು ರಾಶಿ ಬಿದ್ದಿವೆ. ಸೈಕಲ್‌ಗ‌ಳು ಬಿಸಿಲಲ್ಲಿ ಒಣಗುತ್ತಿವೆ, ಮೊನ್ನೆ ಸುರಿದ ಮಳೆಗೆ ನೆನೆದಿವೆ. ಬೀಗದೊಳಗೆ ನೀರು ಹೋಗಿದ್ದಿರಲೂ ಬಹುದು.

ಗುತ್ತಿಗೆದಾರರೇ ಹೊಣೆ
ಗುತ್ತಿಗೆದಾರ, ಸೈಕಲ್‌ ಕಂಪೆನಿಯವರು ಅಂತಿಮವಾಗಿ ನಮಗೆ ಒಪ್ಪಿಸುವವರೆಗೆ ಈ ಸೈಕಲ್‌ಗ‌ಳ ರಕ್ಷಣೆಯ ಜವಾಬ್ದಾರಿ ಅವರದ್ದೇ ಆಗಿದೆ. ಜೋಡಿಸಿಟ್ಟ ಸೈಕಲ್‌ಗ‌ಳನ್ನು ಪರಿಶೀಲಿಸಿದ್ದೇವೆ. ವರದಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸಿಯಾಗಿದೆ. ಅಲ್ಲಿಂದ ಸೂಚನೆ ಬಂದಾಕ್ಷಣ ವಿತರಿಸುತ್ತೇವೆ.
– ಆಶಾ,
ಕ್ಷೇತ್ರ ಶಿಕ್ಷಣಾಧಿಕಾರಿ, ಮೂಡುಬಿದಿರೆ

ವಿಳಂಬ-ವಿಷಾದ
ಈಗಾಗಲೇ ತಡವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇನ್ನೊಂದೆರಡು ಮೂರು ತಿಂಗಳು ಮಾತ್ರ ಉಳಿದಿದೆ. ವಿಳಂಬವಾಗುತ್ತಿರುವುದಕ್ಕೆ ವಿಷಾದವೆನಿಸುತ್ತಿದೆ.
– ಶಿವಾನಂದ ಕಾಯ್ಕಿಣಿ,
ಸೈಕಲ್‌ ವಿತರಣೆಯ ನೋಡೆಲ್‌ ಅಧಿಕಾರಿ

Advertisement

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next