Advertisement

Dharwad: 18 ವರ್ಷ ಅಧ್ಯಯನ ಮಾಡಿ ಪಿಎಚ್‌ಡಿ ಪಡೆದ 89ರ ಅಜ್ಜ!

11:13 PM Feb 08, 2024 | Team Udayavani |

ಧಾರವಾಡ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ವ್ಯಕ್ತಿಗಳಿಗೆ ವಿಶ್ವವಿದ್ಯಾಲಯಗಳೇ ಗೌರವ ಡಾಕ್ಟರೆಟ್‌ ಕೊಡುವುದು ಸಾಮಾನ್ಯ. ಆದರೆ 89 ವರ್ಷ ವಯಸ್ಸಿನ ವೃದ್ಧರೊಬ್ಬರು ತನ್ನ ಮಕ್ಕಳ ವಯಸ್ಸಿನ ಪ್ರಾಧ್ಯಾಪಕರಿಂದ ಮಾರ್ಗದರ್ಶನ ಪಡೆದು, 18 ವರ್ಷ ಹಠ ಬಿಡದೆ ಸಂಶೋಧನ ಪ್ರಬಂಧ ಮಂಡಿಸಿ ಡಾಕ್ಟರೆಟ್‌ ಪಡೆದುಕೊಂಡು ವಿದ್ವತ್‌ ಲೋಕದ ಗಮನ ಸೆಳೆದಿದ್ದಾರೆ.
ಈ ಸಾಧನೆ ಮಾಡಿದ್ದು ಧಾರವಾಡದ ಗಾಂಧಿವಾದಿ ಮಾರ್ಕಂಡೇಯ ದೊಡಮನಿ. ಕರ್ನಾಟಕ ವಿಶ್ವವಿದ್ಯಾ ನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಸಂಶೋಧಕರು ಶಿವಶರಣರ ಬಗ್ಗೆ ಈಗಾಗಲೇ ಪಿಎಚ್‌ಡಿ ಮಾಡಿದ್ದಾರೆ. ಆದರೆ ಡೋಹರ ಕಕ್ಕಯ್ಯನ ಕುರಿತು ಈವರೆಗೆ ಸಿಕ್ಕಿದ್ದು ಕೇವಲ 6 ವಚನಗಳು ಮಾತ್ರ. ಇಷ್ಟನ್ನೇ ಇಟ್ಟುಕೊಂಡು ಡೋಹರ ನೆಲಮೂಲ ಸಂಸ್ಕೃತಿ, ಶರಣರ ಜತೆಗೆ ಕಕ್ಕಯ್ಯ ಹೊಂದಿದ್ದ ಒಡನಾಟ ಸಹಿತ ಎಲ್ಲ ವಿಚಾರಗಳನ್ನು ಮಾರ್ಕಂಡೇಯ ಅವರು ಅತ್ಯಂತ ಶ್ರದ್ಧೆಯಿಂದ ಸಂಶೋಧನಾತ್ಮಕವಾಗಿ ಹೆಕ್ಕಿ ತೆಗೆದು ದಾಖಲಿಸಿಕೊಂಡಿದ್ದಾರೆ.

Advertisement

ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇಷ್ಟು ಹಿರಿ ಯರು ಇದೇ ಪ್ರಥಮ ಬಾರಿಗೆ ಪಿಎಚ್‌ಡಿ ಪದವಿ ಪಡೆದುಕೊಳ್ಳುತ್ತಿದ್ದಾರೆ. ಹಿಂದೆ 76 ವರ್ಷ ಮತ್ತು 79 ವಯಸ್ಸಿನವರು ಕ್ರಮವಾಗಿ ಬೆಂಗಳೂರು ಮತ್ತು ಕಲಬುರಗಿ ವಿವಿಯಿಂದ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಕವಿವಿ ಕನ್ನಡ ಅಧ್ಯಯನ ಪೀಠದ ಕಲಾ ನಿಕಾಯವು ಮಾರ್ಕಂಡೇಯ ಬರೆದ “ಶಿವಶರಣ ಡೋಹರ ಕಕ್ಕಯ್ಯ ಒಂದು ಅಧ್ಯಯನ’ ಎಂಬ 150 ಪುಟಗಳ ಮಹಾಪ್ರಬಂಧಕ್ಕೆ ಪಿಎಚ್‌ಡಿ ನೀಡಿದೆ.

ಟೋಪಿಧಾರಿ ಅಜ್ಜ
ಧಾರವಾಡಕ್ಕೆ ಪ್ರತಿವರ್ಷ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬರುತ್ತಾರೆ. ನಾಲ್ಕು ವಿಶ್ವವಿದ್ಯಾನಿಲಯಗಳು, ಐಐಟಿ, ಐಐಐಟಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕಲಿತು ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ. ಈ ಪೈಕಿ ಅತಿ ಹಿರಿಯರು ಮಾರ್ಕಂಡೇಯ ದೊಡಮನಿ. ಸದಾ ಗಾಂಧಿ ಟೋಪಿ ಧರಿಸಿಕೊಂಡು ಓಡಾಡುವ ಇವರನ್ನು ಟೋಪಿ ಅಜ್ಜ ಎಂದೇ ಎಲ್ಲರೂ ಕರೆಯುತ್ತಾರೆ.

ಡಿಜಿಟಲ್‌ಗೆ ಸಡ್ಡು ಹೊಡೆದು ಸಾಧನೆ ಮಾಡಿದ ಅಜ್ಜ
ಹೊಸ ತಲೆಮಾರಿನ ಯುವಕರಿಗೆ ಡಿಜಿಟಲ್‌ ತಂತ್ರಜ್ಞಾನ ಗೊತ್ತಿದೆ. ಗೂಗಲ್‌ ಸಹಿತ ಅನೇಕ ಕಳ್ಳದಾರಿಗಳ ಮೂಲಕ ದತ್ತಾಂಶಗಳ ಸಂಗ್ರಹ, ಮಾಹಿತಿ ಪಡೆದುಕೊಳ್ಳುವಿಕೆಯ ವಿಧಾನಗಳು ಗೊತ್ತಿವೆ. ಆದರೆ ಮಾರ್ಕಂಡೇಯ ಅವರು ಡಿಜಿಟಲ್‌ಗೆ ಸಡ್ಡು ಹೊಡೆದು ಸಾಂಪ್ರದಾಯಿಕ ವಿಧಾನಗಳನ್ನೇ ಬಳಸಿಕೊಂಡು, ಅಧಿಕೃತವಾಗಿ ಓದಿ, ಕ್ಷೇತ್ರ ಕಾರ್ಯ ಮಾಡಿ, ಸತತ 18 ವರ್ಷ ಸುತ್ತಾಡಿ ಮಾಹಿತಿಗಳನ್ನು ಕಲೆ ಹಾಕಿ ಈ ಪಿಎಚ್‌ಡಿ ಪ್ರಬಂಧ ಮಂಡಿಸಿದ್ದನ್ನು ಕವಿವಿಯ ವಿದ್ವಾಂಸರ ಸಭೆ ಮೆಚ್ಚಿದೆ.

ಚಿಕ್ಕಂದಿನಿಂದಲೂ ಡೋಹರ ಕಕ್ಕಯ್ಯನವರ ಬಗ್ಗೆ ಸಂಶೋಧನೆ ಮಾಡುವ ಹಂಬಲವಿತ್ತು. ಅದಕ್ಕೆ ನೂರಾರು ಕಿ.ಮೀ. ಸುತ್ತಿದ್ದೇನೆ. ಕಕ್ಕಯ್ಯ ಓಡಾಡಿದ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಮಾಹಿತಿ ಸಂಗ್ರಹಿಸಿ ಹಠ ಹಿಡಿದು ಪಿಎಚ್‌ಡಿ ಮುಗಿಸಿದ್ದೇನೆ.
– ಮಾರ್ಕಂಡೇಯ ದೊಡಮನಿ

Advertisement

 ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next