Advertisement

89 ಸಾವಿರ ಹೆಕ್ಟೇರ್‌ ಬೆಳೆ ಹಾನಿ: ಪಾಟೀಲ

06:10 PM Aug 10, 2022 | Team Udayavani |

ಧಾರವಾಡ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅಂದಾಜು 89,148 ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆಗಳು ಹಾನಿಯಾಗಿದ್ದು, ಹೆಸರು, ಉದ್ದು ಕೊಯ್ಲು ಮಾಡಲು ಸಾಧ್ಯವಾಗದೇ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಜಂಟಿ ಸಮೀಕ್ಷೆ ಸಮರ್ಪಕವಾಗಿ ಕೈಗೊಂಡು ಹಾನಿಯ ನಿಖರ ಮಾಹಿತಿ ದಾಖಲಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ಬೆಳೆಹಾನಿ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ರೈತರಿಗೆ ಸ್ಪಂದಿಸಬೇಕು. ಬೆಳೆವಿಮಾ ಕಂಪೆನಿಗಳ ಪ್ರತಿನಿಧಿಗಳು ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಲಭ್ಯ ಇರಬೇಕು. ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ ಎಫ್‌ ಮಾರ್ಗಸೂಚಿಗಳನ್ವಯ ಪರಿಹಾರಕ್ಕೆ ಜಂಟಿ ಸಮೀಕ್ಷೆ ಸಮರ್ಪಕವಾಗಿ ನಡೆಯಬೇಕು ಎಂದು ಸೂಚಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌, ಕರ್ನಾಟಕ ರೈತ ಸುರಕ್ಷಾ ಫಸಲ್‌ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿರುವ ರೈತರು ಇ-ಕೆವೈಸಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 34 ಸಾವಿರ ಲೀಟರ್‌ ನ್ಯಾನೋ ಯೂರಿಯಾ ಬಳಸಿದ್ದಾರೆ. ಜಾಗತಿಕ ತಾಪಮಾನ ನಿಯಂತ್ರಣ ಹಾಗೂ ಭೂಮಿಯ ಫಲವತ್ತತೆ ಹೆಚ್ಚಳಕ್ಕೆ ಇದು ಪೂರಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ಪ್ರಶಂಸನೀಯ ಎಂದರು.

ಇದು ಗಂಭೀರವಾದ ಸಭೆ. ಇಂತಹ ಸಭೆಗೆ ಗೈರು ಹಾಜರಾಗಿರುವ ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನೋಟೀಸ್‌ ಜಾರಿ ಮಾಡುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ. ಮಾತನಾಡಿ, ಜೂನ್‌ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 89 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿ ಬೆಳೆ ಹಾನಿಯಾಗಿದೆ. ಇದರಲ್ಲಿ ಹೆಸರು ಬೆಳೆ ಹಾನಿ ಪ್ರಮಾಣವೇ 61 ಸಾವಿರ ಹೆಕ್ಟೇರಿನಷ್ಟಿದೆ. ಹೆಚ್ಚಿನ ಮಳೆಯಿಂದ ಹೆಸರು ಮತ್ತು ಉದ್ದು ಬೆಳೆಯ ಕೊಯ್ಲು ಕಷ್ಟಸಾಧ್ಯವಾಗಿದೆ. ಅಧಿಕ ತೇವಾಂಶದಿಂದ ಶೇಂಗಾ ಕೊಳೆಯುವ ಹಂತದಲ್ಲಿದೆ. ಹತ್ತಿ, ಮೆಕ್ಕೆಜೋಳ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ.

Advertisement

1,48,166 ರೈತರು ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬೀಜ, ರಸಗೊಬ್ಬರ ಪೂರೈಕೆ ಸಮರ್ಪಕವಾಗಿದೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ಅಧಿಕಾರಿಗಳು ಇದ್ದರು.

ಈ ಬಾರಿ ಉತ್ತಮ ಬೆಳೆ ಬಂದಿತ್ತು. ಆದರೆ ಅತಿವೃಷ್ಟಿಯಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆವಿಮಾ ಕಂಪೆನಿಗಳ ಬಗ್ಗೆ ರೈತರು ಅಸಮಾಧಾನ ಹೊಂದಿದ್ದು, ಕಂಪೆನಿಗಳು ರೈತಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು.
∙ಅಮೃತ ದೇಸಾಯಿ, ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next