ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿ ದೇಶದಲ್ಲಿ ನೆಲೆಸಿರುವ ಮಂಡ್ಯದವರು ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿರುವ ಎಲ್ಲ ಕನ್ನಡಿಗರನ್ನು ಅಕ್ಷರ ಜಾತ್ರೆಗೆ ಆಹ್ವಾನಿಸುವ ನಿಟ್ಟಿನಲ್ಲಿ ಪರಿಷತ್ತು ಅಣಿಯಾಗುತ್ತಿದೆ. ಈಗಾಗಲೇ ಮಂಡ್ಯದ ಎರಡು ಕಡೆಗಳಲ್ಲಿ ಸ್ಥಳ ವೀಕ್ಷಿಸಲಾಗಿದೆ.
ಮಂಡ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಹಾಗೂ ಚಿಕ್ಕ ಮಂಡ್ಯದಲ್ಲಿ ಅಕ್ಷರ ಜಾತ್ರೆ ಆಯೋಜಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಲಾಗಿದೆ. ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ನಂತರ ಈ ಬಗ್ಗೆ ಚರ್ಚಿಸಿ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತಲೂ ಅದ್ಧೂರಿಯಾಗಿ ಅಕ್ಷರ ಜಾತ್ರೆ ಹಮ್ಮಿಕೊಳ್ಳುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚರ್ಚೆ ನಡೆದಿದೆ.
ಐರೋಪ್ಯ ರಾಷ್ಟ್ರಗಳಲ್ಲಿ ಮಂಡ್ಯ ಮೂಲದರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರು ತಮ್ಮೂರಿನಲ್ಲಿ ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವ ಬಗ್ಗೆ ಒಲವು ತೋರಿದ್ದಾರೆ. ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ರಜೆ ಅಂಗವಾಗಿ ವಿದೇಶದಲ್ಲಿರುವ ಕನ್ನಡಿಗರು ಕೂಡ ತವರೂರಿಗೆ ಆಗಮಿಸಲಿದ್ದಾರೆ. ಕೊಲ್ಲಿ ರಾಷ್ಟ್ರ ಸೇರಿದಂತೆ ವಿವಿಧ ದೇಶದಲ್ಲಿರುವ ಕನ್ನಡಿಗರು ಕೂಡ ಅಧಿಕ ಸಂಖ್ಯೆಯಲ್ಲಿ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಡಿ. 15, 16, 17ರಂದು ಸಾಹಿತ್ಯ ಜಾತ್ರೆ?: ಸಮ್ಮೇಳನವನ್ನು ಡಿಸೆಂಬರ್‌ನ 15, 16 ಮತ್ತು 17ರಂದು ನಡೆಸುವ ಉದ್ದೇಶವಿದೆ. ಹೊಸ ಸರ್ಕಾರದ ಜತೆ ಸಮಾಲೋಚಿಸಿ ಡಿಸೆಂಬರ್‌ನಲ್ಲೆ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. “ಉದಯವಾಣಿ’ ಜತೆ ಮಾತನಾಡಿದ ಅವರು, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆದಿಚುಂಚನ ಶ್ರೀಗಳ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಲಾಗುವುದು. ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಮತ್ತು ಲೋಪದೋಷಗಳನ್ನು ಗಮನದಲ್ಲಿಟ್ಟುಕೊಂಡು ನಾಡಿನ ವಿವಿಧ ಮಠಾಧೀಶರ ಜತೆಗೂ ಸಮಾಲೋಚನೆ ನಡೆಸಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಆಯೋಜನೆ ತಪ್ಪಿಸಿಕೊಂಡ ಬಳ್ಳಾರಿ: ಈ ಹಿಂದೆ ಹಾವೇರಿಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನ ಆಯೋಜಿಸುವ ಬಗ್ಗೆ 9 ಜಿಲ್ಲೆಗಳು ಮನವಿ ಮಾಡಿದ್ದವು. ಆದರೆ ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳ ನಡುವೆ ಸಮ್ಮೇಳನ ಆಯೋಜನೆಗೆ ಭಾರೀ ಪೈಪೋಟಿ ಕಂಡುಬಂದಿತ್ತು. ಮತ ಚಲಾವಣೆಯಲ್ಲಿ ಮಂಡ್ಯಕ್ಕೆ 17 ಮತ್ತು ಬಳ್ಳಾರಿಗೆ 16 ಮತ ಲಭಿಸಿದವು. ಹೀಗಾಗಿ, ಬಳ್ಳಾರಿ ಜಿಲ್ಲೆ ಕೇವಲ ಒಂದು ಮತದ ಅಂತರದಿಂದ ಅಕ್ಷರ ಜಾತ್ರೆ ಆಯೋಜನೆ ಕೈ ತಪ್ಪಿಸಿಕೊಂಡಿತು.
ಮಂಡ್ಯ ಜಿಲ್ಲೆಯ ನಾಗಮಂಗಲದ ಮೂಲದವರು ಅಧಿಕ ಸಂಖ್ಯೆಯಲ್ಲಿ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಅವರು ಸೇರಿದಂತೆ ಹಲವು ದೇಶಗಳಲ್ಲಿ ನೆಲೆನಿಂತಿರುವ ಸುಮಾರು 2 ಸಾವಿರ ಕನ್ನಡಿಗರನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು. ಕ್ರಿಸ್ಮಸ್ ಹಬ್ಬದ ಮೊದಲೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಸಬೇಕೆಂಬ ಉದ್ದೇಶವಿದೆ.
●ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
–ದೇವೇಶ ಸೂರಗುಪ್ಪ