ನಾನು ಕೋವಿಡ್ ಸೋಂಕಿಗೆ ಒಳಗಾಗಿದ್ದಾಗ ಅಲ್ಲಿ ಸೋಂಕಿತರು ಪಡುವ ಕಷ್ಟವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮನೆಯವರು ಹೊಟ್ಟೆಗಿಲ್ಲದೇ ತಮ್ಮ ಸಂಬಂಧಿಕರು ಶೀಘ್ರ ಗುಣಮುಖವಾಗಲಿ ಎಂದು ಕಷ್ಟ ಪಡುವುದನ್ನು ಕಂಡಿದ್ದೇನೆ. ನಾನು ಬಹಳಷ್ಟು ದುಃಖವನ್ನು ನೋಡಿದೆ. ಆಮ್ಲಜನಕದ ಕೊರತೆ ಯುದ್ಧದ ಮಧ್ಯದಲ್ಲಿ ನಿಂತಿದ್ದಂತೆ ಕಾಣಿಸಿತತು ನನಗೆ. ಎಲ್ಲರೂ ಭಯಭೀತರಾಗಿದ್ದರು. ನನ್ನ ಗಂಡನನ್ನು ಕಳೆದುಕೊಂಡ ನಂತರ, ನಾನು ನನ್ನನ್ನೂ ಕಳೆದುಕೊಂಡೆ. ನಾನು ತೀವ್ರವಾದ ನೋವು ಮತ್ತು ಆಘಾತದಲ್ಲಿದ್ದೆ. ಆ ದುಃಖದ ತೀವ್ರತೆಯ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಆ ದುಃಖದಿಂದ ಹೊರಬರಲು ಹಾಗೂ ದುಃಖದಲ್ಲಿರುವವರಿಗೆ ಸ್ಪಂದಿಸಲು ನಾನು ಈ ಸಣ್ಣ ಉದ್ಯಮವನ್ನು ಆರಂಭಿಸಿ ಇದರಿಂದ ಬರುವ ಆದಾಯದಿಂದ ಕೋವಿಡ್ ನಿಂದ ಬಳಲುತ್ತಿರುವವರಿಗೆ ಸಣ್ಣ ಮಟ್ಟಿಗೆ ವಿನಯೋಗಿಸಲು ಬಯಸುತ್ತಿದ್ದೇನೆ ಎನ್ನುವುದು 87 ವರ್ಷದ ಉಷಾ ಗುಪ್ತಾ ಅವರ ಮಾತು.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 200 ಅಂಕ ಜಿಗಿತ: 16,700 ಅಂಕ ಸಮೀಪಿಸಿದ ನಿಫ್ಟಿ
ಹೌದು, ಕೋವಿಡ್ 19 ಎರಡನೇ ಅಲೆ 87 ವರ್ಷದ ಉಷಾ ಗುಪ್ತಾಳ ದುಃಖ ಮತ್ತು ನೋವಿಗೆ ಕಾರಣವಾಗಿತ್ತು. ಆಕೆ ಮತ್ತು ಆಕೆಯ ಪತಿ ರಾಜ್ ಕುಮಾರ್ ಅವರಿಗೆ ಕೋವಿಡ್ ವೈರಸ್ ತಗುಲಿದ್ದು, ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಆದಾಗ್ಯೂ, 27 ದಿನಗಳ ಸಾವು ಬದುಕಿನ ಹೋರಾಟದ ನಂತರ, ಉಷಾ ಅವರ ಪತಿ ನಿಧನರಾದರು. ಈ ಮೂಲಕ ಉಷಾ ಅವರೊಂದಿಗಿನ ರಾಜ್ ಕುಮಾರ್ ಅವರ ಆರು ದಶಕಗಳ ವೈವಾಹಿಕ ಜೀವನಕ್ಕೆ ಕೋವಿಡ್ ಅಂತಿಮ ಚುಕ್ಕಿ ಇಟ್ಟಿತ್ತು.
ತನ್ನ ಪತಿಯ ಸಾವಿನಿಂದ ಅಪಾರ ನೋವು ಅನುಭವಿಸಿದ ಉಷಾ ಗುಪ್ತಾ, ಮನೆಯಲ್ಲಿ ತಯಾರಿಸಿದ ಉಪ್ಪಿನ ಕಾಯಿ ಮಾರಾಟವನ್ನು ಆರಂಭಿಸಿದ್ದಾರೆ. ಜುಲೈ 2021 ರಲ್ಲಿ ‘ಪಿಕಲ್ಡ್ ವಿತ್ ಲವ್’ ಸಣ್ಣ ಉದ್ಯಮವನ್ನು ಆರಂಭಿಸಿದರು. ಇದರಿಂದ ಬರುವ ಆದಾಯದಿಂದ ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವವರಿಗೆ ಹಾಗೂ ಅವರ ಕುಟುಂಬದವರಿಗೆ ಆಹಾರವನ್ನು ಒದಗಿಸಲು ಬಳಸಲಾಗುತ್ತದೆ ಎಂದು ತೃಪ್ತ ಮನಸ್ಸಿನಿಂದ ಹೇಳುತ್ತಾರೆ ಉಷಾ.
ಉಪ್ಪಿನಕಾಯಿ ಉದ್ಯಮಕ್ಕೆ ಮೊಮ್ಮಗಳೇ ಸ್ಫೂರ್ತಿ :
ಈ ಸಣ್ಣ ಉಪ್ಪಿನಕಾಯಿ ಉದ್ಯಮವನ್ನು ಆರಂಭಿಸಲು ನನ್ನ ಮೊಮ್ಮಗಳು, ಮಕ್ಕಳ ವೈದ್ಯರಾದ ರಾಧಿಕಾ ಬಾತ್ರಾ ಸ್ಫೂರ್ತಿ ಎನ್ನುತ್ತಾರೆ 87ರ ಅಜ್ಜಿ. ಆಕೆ ಸ್ವತಃ ವೈದ್ಯಳಾಗಿ ಈ ಎಲ್ಲಾ ವೇದನೆಗಳ ಬಗ್ಗೆ ಅರಿತಿದ್ದಾಳೆ. ಕೋವಿಡ್ ಸೋಂಕಿತರು ಪಡುವ ಯಾತನೆಯನ್ನು ಹತ್ತಿರದಿಂದ ಕಂಡು ಮರುಗಿದ್ದಾಳೆ. ಹೊಟ್ಟೆಗೆ ತುತ್ತಿಲ್ಲದೇ ಪರಿತಪಿಸುವುದನ್ನು ಕಂಡು ಆಕೆ ನೊಂದಿದ್ದಾಳೆ. ಅವರಿಗೆ ಹೇಗಾದರೂ ಮಾಡಿ ಊಟಕ್ಕೆ ಸಹಾಯ ಮಾಡಬೇಕು ಎಂಬ ಆಲೋಚನೆ ಬಂದಾಗ ನನ್ನಲ್ಲಿ ಈ ವಿಷಯ ಪ್ರಸ್ತಾಪಿಸಿದಳು. ನಾನು ಒಪ್ಪಿಗೆ ನೀಡಿದೆ. ಈ ಉಪ್ಪಿನ ಕಾಯಿ ಹಾಗೂ ಚಟ್ನಿ ಮಾಡುವುದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಪೂರೈಸುವುದು ನನ್ನ ಮೊಮ್ಮಗಳೇ, ಅದಾದ ಮೇಲೆ ಉಪ್ಪಿನ ಕಾಯಿ ಹಾಕುವುದಕ್ಕೆ ಬಾಟಲಿಗಳು, ಲೇಬಲ್ ಪ್ರಿಂಟರ್ ಗಳು ಎಲ್ಲದಕ್ಕೂ ಆಕೆಯದ್ದೇ ಖರ್ಚು ವೆಚ್ಚ. ಅದರಿಂದ ಬರುವ ಆದಾಯವನ್ನು ಕೋವಿಡ್ ಸೆಂಟರ್ ಗಳಲ್ಲಿ ಊಟಕ್ಕಾಗಿ ಪರದಾಡುವ ಸೋಂಕಿತರಿಗೆ ಹಾಗೂ ಸೋಂಕಿತರ ಮನೆಯವರಿಗೆ ನೀಡಲು ಆಕೆ ಮನಸ್ಸು ಮಾಡಿರುವುದು ನನಗೆ ತುಂಬಾ ಸಂತಸದ ಸಂಗತಿ ಎನ್ನುತ್ತಾರೆ ಉಷಾ ಗುಪ್ತಾ.
ಪ್ರತಿ ಪೈಸೆಯೂ ಮುಖ್ಯವಾಗಿದೆ. ಸಣ್ಣ ಪ್ರಮಾಣದಲ್ಲಿ ಆದರೂ ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಸಾಧ್ಯವಾಯಿತು ಎಂದು ನನಗೆ ಖುಷಿಯಾಗಿದೆ. 200 ಗ್ರಾಂ ಉಪ್ಪಿನಕಾಯಿ ಅಥವಾ ಚಟ್ನಿ ಬಾಟಲಿಯ ಬೆಲೆ 150 ರೂ. ಮಾರಾಟದಿಂದ ಸಂಗ್ರಹಿಸಿದ ಈ ಹಣವನ್ನು ಕೋವಿಡ್‌ನಿಂದ ಬಳಲುತ್ತಿರುವ 65,000 ಕ್ಕೂ ಹೆಚ್ಚು ನಿರ್ಗತಿಕರಿಗೆ ಆಹಾರ ಒದಗಿಸಲು ಬಳಸಿದ್ದಾರೆ ಎನ್ನುವುದು ಶ್ಲಾಘನೀಯ.
ಅಡುಗೆ ಕಲಿಸಲು ನಾನ್ ರೆಡಿ : ಉಷಾ ಗುಪ್ತಾ
ಇನ್ನು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ತಮ್ಮದೇ ಆದ ಸಣ್ಣ ಉದ್ಯಮಗಳನ್ನು ಆರಂಭಿಸಲು ತರಬೇತಿ ನೀಡಲು ನಾನು ಸಿದ್ಧಳಿದ್ದೇನೆ. ಅಂತಹ ಮಹಿಳೆಯರಿಗೆ ತರಬೇತಿ ನೀಡಲು ಮತ್ತು ಜೀವನೋಪಾಯವನ್ನು ಸುಲಭವಾಗಿ ಗಳಿಸಲು ಅಡುಗೆ ಒಂದು ಒಳ್ಳೆಯ ಉಪಾಯ. ಅಡುಗೆ ಮಾಡಲು ತಿಳಿಯದವರಿಗೆ ಅಡುಗೆ ಮಾಡಲು ಕಲಿಸಲು ತಾನು ಸಿದ್ಧ ಎಂದು ನಗು ನಗುತ್ತಾ ಹೇಳುತ್ತಾರೆ ಉಷಾ ಗುಪ್ತಾ.
ಮತ್ತೊಂದು ವಿಶೇಷ ಏನೆಂದರೇ, ಅಡುಗೆಗೆ ಸಂಬಂಧಿಸಿದ ಭಾರತೀಯ ಸಸ್ಯಾಹಾರಿ ತಿನಿಸು (Indian Vegetarian Cuisine) ಎಂಬ ಪುಸ್ತಕವನ್ನುಕೂಡ ಪ್ರಕಟಿಸಿದ್ದಾರೆ.
ಒಟ್ಟಿನಲ್ಲಿ, ಈ ಇಳಿ ವಯಸ್ಸಿನಲ್ಲೂ ಪರೋಪಕಾರದ ಗುಣ ಇಟ್ಟುಕೊಂಡು ಮೊಮ್ಮಗಳ ಆರ್ಥಿಕ ಸಹಾಯದೊಂದಿಗೆ ಉಪ್ಪಿನ ಕಾಯಿ ಉದ್ಯಮ ಆರಂಭಿಸಿದ ಉಷಾ ಗುಪ್ತಾ ಅವರ ನಡೆ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ : ಎಚ್ಚರಿಕೆ…ದೇಶ ಬಿಟ್ಟು ತೆರಳಬೇಡಿ: ತಾಲಿಬಾನ್ ಬೆದರಿಕೆಗೆ ಅಫ್ಘಾನ್ ನಾಗರಿಕರು ಕಂಗಾಲು