ನವದೆಹಲಿ:ದೇಶಾದ್ಯಂತ ಕೋವಿಡ್ 19 ಮಹಾಮಾರಿ ವೈರಸ್ ಸೋಂಕಿತರ ಸಂಖ್ಯೆ 979ಕ್ಕೆ ಏರಿದ್ದು, ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ತಲುಪಿದೆ. ಏತನ್ಮಧ್ಯೆ ಭಾರತದಲ್ಲಿ ಸುಮಾರು 86ಮಂದಿ ಕೋವಿಡ್ 19 ಸೋಂಕಿತರು ಚೇತರಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ದೇಶಾದ್ಯಂತ ಕೋವಿಡ್ 19ಸೋಂಕು ಪೀಡಿತರ ಸಂಖ್ಯೆ ಕ್ಷಿಪ್ರವಾಗಿ ಹರಡುತ್ತಿರುವ ನಡುವೆಯೇ ಸ್ವಲ್ಪ ನೆಮ್ಮದಿಯ ಸುದ್ದಿಯೊಂದು ಹೊರಬಿದ್ದಿದೆ. ಕೋವಿಡ್ 19 ಸೋಂಕಿತರಲ್ಲಿ ಶೇ.10ರಷ್ಟು ಗುಣಮುಖರಾಗುತ್ತಿದ್ದಾರೆ. ದೇಶದಲ್ಲಿ 86 ಮಂದಿ ಕೋವಿಡ್ 19 ಪೀಡಿತರು ಗುಣಮುಖರಾಗಿರುವುದಾಗಿ ವಿವರಿಸಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ 19 ಸೋಂಕು ಅತೀ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಒಟ್ಟು 400ರ ಸಮೀಪದಲ್ಲಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 186ಕ್ಕೆ ಏರಿದ್ದು, ಈವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. 25 ಕೋವಿಡ್ 19 ಪೀಡಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕೇರಳದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 182ಕ್ಕೆ ಏರಿದೆ. ಈಗಾಗಲೇ 19 ಜನರು ಸಾವನ್ನಪ್ಪಿದ್ದು, 15 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ವಿವರ ನೀಡಿದೆ.