ಕೋಲ್ಕತಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಟಿಎಂಸಿ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಆಪ್ತೆ ಅರ್ಪಿತಾ ಮುಖರ್ಜಿಯನ್ನು ಪ್ರತಿ 48 ಗಂಟೆಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕೆಂದು ಕೋರ್ಟ್ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ 6 ಬೆಂಗಾವಲು ಪಡೆ ವಾಹನ ಮತ್ತು 86 ಯೋಧರ ಬಿಗಿ ಭದ್ರತೆಯಲ್ಲಿ ಪಾರ್ಥ, ಅರ್ಪಿತಾಳನ್ನು ಇಎಸ್ ಐ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಾಗರ: ಅಬ್ಬರದ ಮಳೆ ಹಿನ್ನಲೆ; ತುಂಬಿ ಹರಿಯುತ್ತಿರುವ ಇರುವಕ್ಕಿ ಸೇತುವೆ
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಬ್ಬರನ್ನೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿದ್ದರು. ಮಂಗಳವಾರ (ಆಗಸ್ಟ್ 02) ಬೆಳಗ್ಗೆ ಪಾರ್ಥ ಮತ್ತು ಅರ್ಪಿತಾಳನ್ನು ಇಎಸ್ ಐ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ವರದಿ ವಿವರಿಸಿದೆ.
ಪಾರ್ಥ ಮತ್ತು ಅರ್ಪಿತಾ ಸೇರಿದಂತೆ ಇಬ್ಬರನ್ನೂ ಕೋರ್ಟ್ ಹತ್ತು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೊಪ್ಪಿಸಿತ್ತು. ಪಾರ್ಥ ಆಪ್ತೆ ಅರ್ಪಿತಾ ನಿವಾಸದಲ್ಲಿ ಸುಮಾರು 50 ಕೋಟಿ ರೂಪಾಯಿಯಷ್ಟು ನಗದು ಹಾಗೂ 5 ಕೆಜಿಗೂ ಅಧಿಕ ಚಿನ್ನವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ವಿಚಾರಣೆ ಪೂರ್ಣಗೊಂಡಿದ್ದು, ಬುಧವಾರ ಕೋರ್ಟ್ ಗೆ ವರದಿ ಸಲ್ಲಿಸಲಾಗುವುದು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಆರೋಪದ ಬಗ್ಗೆ ಪಾರ್ಥ ತನಗೇನೂ ಗೊತ್ತಿಲ್ಲ ಎಂದು ಹೇಳುತ್ತಿರುವುದಾಗಿ ಇ.ಡಿ ಅಧಿಕಾರಿಗಳು ಆರೋಪಿಸಿದ್ದಾರೆ.