Advertisement

86 ದಿನ ಬಾಕಿ ; 2 ವರ್ಷ ನಂತರ ಅದ್ದೂರಿ ದಸರಾ ಉತ್ಸವಕ್ಕೆ ಸಿದ್ಧತೆ

05:44 PM Jul 01, 2022 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸದ್ದಿಲ್ಲದೆ ಸಜ್ಜಾಗುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಯಾದ ಜಂಬೂ ಸವಾರಿಗೆ ಗಜಪಡೆ ಕರೆತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

Advertisement

ಕೊರೊನಾ ಸೋಂಕು ಹಿನ್ನೆಲೆ ಕಳೆದೆರೆಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ದಸರಾ ಮಹೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ ದಸರಾ ಉತ್ಸವಕ್ಕೆ ಮೆರುಗು ನೀಡುವ ದಸರಾ ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ. ಅದಕ್ಕಾಗಿ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ತೆರಳಿ ಎಲ್ಲಾ ಆನೆಗಳ ಆರೋಗ್ಯ, ಅವುಗಳ ಸಾಮರ್ಥ್ಯ, ಸ್ವಭಾವವನ್ನು ಪರೀಕ್ಷಿಸಿ ತಿಂಗಳ ಅಂತ್ಯದೊಳಗೆ 2022ರ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಅದಕ್ಕಾಗಿ ಜು.10ರ ಬಳಿಕ ಎಲ್ಲಾ ಆನೆ ಶಿಬಿರಗಳಿಗೂ ಅಧಿಕಾರಿಗಳ ತಂಡ ತೆರಳಲಿದೆ.

ಆನೆಗಳ ಆಹಾರ ಪೂರೈಕೆಗೆ ಟೆಂಡರ್‌: ದಸರಾ ಉತ್ಸವಕ್ಕೆ 86 ದಿನ ಬಾಕಿ ಇದ್ದು, ಸೆ.26ರಿಂದ ನವರಾತ್ರಿ ಆರಂಭವಾಗಲಿದೆ. ಅ.5ರ ವಿಜಯ ದಶಮಿಯ ದಿನ ಜಂಬೂ ಸವಾರಿ ನಡೆಯಲಿದೆ. ಅದರ ಅಂಗವಾಗಿ 60 ದಿನ ಮುಂಚಿತವಾಗಿಯೇ ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅವುಗಳಿಗೆ ಗುಣಮಟ್ಟ ಆಹಾರ ಪೂರೈಕೆಗೆ ಇಲಾಖೆ ಟೆಂಡರ್‌ ಆರಂಭಿಸಿದ್ದು, ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ 15 ಆನೆಗಳು?: ಕೊರೊನಾ ಸೋಂಕು ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ದಸರಾ ಉತ್ಸವವನ್ನು ಸರ್ಕಾರ ಅರಮನೆಗೆ ಸೀಮಿತಗೊಳಿಸಿ, ಸರಳವಾಗಿ ಆಚರಿಸಿತ್ತು. ಈ ಬಾರಿ ಅದ್ದೂರಿಯಾಗಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ಅಂಬಾರಿ ಆನೆ ಅಭಿಮನ್ಯು ಜತೆಗೆ ಅರ್ಜುನ, ಗೋಪಾಲಸ್ವಾಮಿ, ವಿಕ್ರಮ, ಧನಂಜಯ, ಅಶ್ವತ್ಥಾಮ ಸೇರಿ 15 ಆನೆ ಕರೆತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಜುಲೈ ಅಂತ್ಯದೊಳಗೆ ಅವುಗಳ ಪಟ್ಟಿಯನ್ನು
ಅಂತಿಮಗೊಳಿಸಿ ದಸರಾ ಉನ್ನತ ಮಟ್ಟದ ಸಮಿತಿ ಸಭೆಗೆ ನೀಡಲಿದೆ.

ಆಗಸ್ಟ್‌ ಮೊದಲ ವಾರದಲ್ಲಿ ಗಜಪಯಣ: ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಆನೆಗಳ ಆಯ್ಕೆ ಪಟ್ಟಿಗೆ ಒಪ್ಪಿಗೆ ಸಿಕ್ಕ ಬಳಿಕ, ಆಗಸ್ಟ್‌ ಮೊದಲ ವಾರದಲ್ಲಿ ಗಜಪಯಣ ಕಾರ್ಯಕ್ರಮ ನಡೆಯಲಿದೆ. ನಾಗರ ಹೊಳೆಯ ವೀರನಹೊಸಹಳ್ಳಿಯಲ್ಲಿ ಗಜಪಯಣದ ಮೂಲಕ ಮೈಸೂರಿಗೆ ಆನೆಗಳನ್ನು ಕರೆತಲಾಗುತ್ತದೆ.

Advertisement

ಎರಡು ವರ್ಷಗಳಿಂದ ದಸರಾ ಉತ್ಸವ ಅರಮನೆಗೆ ಸೀಮಿತವಾದ ಹಿನ್ನೆಲೆ ಆನೆಗಳಿಗೆ ರಾಜಮಾರ್ಗದಲ್ಲಿ ಜಂಬೂ ಸವಾರಿ ತಾಲೀಮು ಹೆಚ್ಚು ಅಗತ್ಯವಿದೆ. ಈ ಹಿನ್ನೆಲೆ 60 ದಿನ ಮುಂಚಿತವಾಗಿಯೇ ಗಜಪಡೆಯನ್ನು ಕರೆತಂದು ನಿತ್ಯ ಬೆಳಗ್ಗೆ ಮತ್ತು ಸಂಜೆ ಒಣ ತಾಲೀಮು ನಡೆಸಿ, ಬಳಿಕ ಬಾರ ಹೊರುವ ತಾಲೀಮು ನಡೆಸುವ ಮೂಲಕ ಜಂಬೂ ಸವಾರಿಗೆ ಅಷ್ಟೂ ಆನೆಗಳನ್ನು ಅಣಿ ಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಈ ಬಾರಿಯ ದಸರಾ ಉತ್ಸವಕ್ಕೆ 86 ದಿನ ಬಾಕಿ ಇದೆ. ಆನೆಗಳಿಗೆ ವಿಯದಶಮಿಯಂದು ನಡೆಯುವ ಜಂಬೂ ಸವಾರಿಗೆ ಅಗತ್ಯ ತಾಲೀಮು ನೀಡಲು 60 ದಿನ ಮುಂಚಿತವಾಗಿ ಆನೆಗಳನ್ನುಮೈಸೂರಿಗೆ ಕರೆತರಲಾಗುವುದು. ಅದಕ್ಕಾಗಿ ಆನೆ ಶಿಬಿರಗಳಿಗೆ ತೆರಳಿ ತಿಂಗಳಾಂತ್ಯಕ್ಕೆ ದಸರಾ ಆನೆಗಳ ಪಟ್ಟಿ ಸಿದ್ಧ ಪಡಿಸುತ್ತೇವೆ.
● ಡಾ.ವಿ.ಕರಿಕಾಳನ್‌, ಡಿಸಿಎಫ್
ವನ್ಯಜೀವಿ ವಿಭಾಗ ಮೈಸೂರು.

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next