Advertisement

ಹೊದಿಗೆರೆಯ ಹಸನ್ಮುಖಿ

10:16 AM Feb 07, 2020 | mahesh |

ದಾವಣಗೆರೆಯ ಚನ್ನಗಿರಿ ತಾಲೂಕಿನ ಹೊದಿಗೆರೆ, ಎಚ್ಚೆಸ್ವಿ ತಾಯಿ ನಾಗರತ್ನಮ್ಮನವರ ತವರೂರು, ಗಂಡ ತೀರಿಕೊಂಡ ನಂತರ, ತಂದೆ ಶಾನುಭೋಗ ಭೀಮರಾವ್‌ರ ಮನೆಗೆ ವಾಪಸಾದ ನಾಗರತ್ನಮ್ಮವರು, ಸಂಗೀತ ಪಾಠ ಹೇಳುತ್ತಾ ಜೀವನ ಸಾಗಿಸತೊಡಗಿದರು. ಮುಂದೆ ಇಂಟರ್‌ ಮಿಡಿಯೇಟ್‌ ಪೂರೈಸಿ ಹೊದಿಗೆರೆ ಶಾಲೆಯಲ್ಲಿಯೇ ಶಿಕ್ಷಕಿಯಾದರು. ಹಾಗಾಗಿ, ಎಚ್‌ಎಸ್‌ವಿ ಅವರ ಬಾಲ್ಯ ಅಜ್ಜನ ಮನೆಯಲ್ಲಿಯೇ ಕಳೆಯಿತು.

Advertisement

ನಾಲ್ಕು ಕಿ.ಮೀ. ನಡೆಯಬೇಕಿತ್ತು…
1819 ರಲ್ಲಿ ಪ್ರಾರಂಭವಾದ ಹೊದಿಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯವರೆಗೆ ಓದಿದ ಎಚ್‌ಎಸ್‌ವಿ, ಹೈಸ್ಕೂಲ್‌ ಓದಿದ್ದು 15 ಕಿ.ಮೀ. ದೂರದ ಮಲ್ಲಾಡಿಹಳ್ಳಿಯಲ್ಲಿ. ಬಸ್‌ನಲ್ಲಿ ಓಡಾಡುತ್ತಿದ್ದರಾದರೂ, ಬಸ್‌ ನಿಲ್ದಾಣದವರೆಗೆ ನಾಲ್ಕು ಕಿ.ಮೀ. ನಡೆಯಲೇಬೇಕಿತ್ತು. ಆದರೂ, ವಿದ್ಯೆಯ ಬಗೆಗಿದ್ದ ಅಪಾರ ಆಸಕ್ತಿ ಹಾಗೂ ಚೆನ್ನಾಗಿ ಓದಿ ಅಮ್ಮನಿಗೆ ಆಸರೆ ಆಗಬೇಕೆಂಬ ಉತ್ಕಟ ಹಂಬಲದಿಂದ ಅವರು ಒಂದು ದಿನವೂ ಶಾಲೆ ತಪ್ಪಿಸುತ್ತಿರಲಿಲ್ಲವಂತೆ.

ಬಾಡಿಗೆಗೆ ಕೊಡಲಾಗಿದೆ…
ಹೊದಿಗೆರೆಯ ಕೋಟೆ ಪ್ರದೇಶ (ಈಶ್ವರನ ಗುಡಿ ರಸ್ತೆ)ದಲ್ಲಿರುವ ಕವಿ ಮನೆಯ ಹೆಸರು “ಸುರಭಿ’. ಮನೆಯ ಮುಂದೆ, ಜನ ಪ್ರೀತಿಯ ಕವಿ ಡಾ. ವೆಂಕಟೇಶ್‌ಮೂರ್ತಿ ಸ್ವಗೃಹ ಎಂದು ಬರೆಯಲಾಗಿದೆ. ಎಚ್‌ಎಸ್‌ವಿ ತಾಯಿ ಮತ್ತು ಅಜ್ಜಿ, ಅಂತಿಮ ದಿನಗಳವರೆಗೂ ಹೊದಿಗೆರೆಯಲ್ಲಿ ನೆಲೆಸಿದ್ದರು. ಅವರ ಆರೈಕೆಗಾಗಿ ಎಚ್‌ಎಸ್‌ವಿ, ತಮ್ಮ ಹಿರಿಯ ಮಗ ಸುಮಂತ್‌ನನ್ನು ಅಲ್ಲಿ ಬಿಟ್ಟಿದ್ದರು. ಸದ್ಯ, ಆ ಮನೆಯನ್ನು ಬಾಡಿಗೆಗೆ ಕೊಡಲಾಗಿದೆ.

ಸರಳ ವ್ಯಕ್ತಿತ್ವ
“ನಾನೊಬ್ಬ ದೊಡ್ಡ ಕವಿ ಎಂಬ ಅಹಂ ಎಚ್‌ಎಸ್‌ವಿ ಅವರಿಗೆ ಇಲ್ಲವೇ ಇಲ್ಲ. ಊರಿಗೆ ಬಂದಾಗ ಎಲ್ಲರೊಂದಿಗೆ ಬಹಳ ಸುಲಭವಾಗಿ ಬೆರೆಯುತ್ತಾರೆ. ಹುಟ್ಟೂರಿನಲ್ಲಿ ನೀರು ಬಿಡುತ್ತಿದ್ದ ಇಸ್ಮಾಯಿಲ್‌ಸಾಬ್‌ ಕುರಿತಾಗಿಯೇ ಗೀತೆಯೊಂದನ್ನು ಬರೆದಿದ್ದಾರೆ’ ಅಂತ ಅಭಿಮಾನದಿಂದ ಎಚ್‌ಎಸ್‌ವಿ ಅವರನ್ನು ನೆನೆಯುತ್ತಾರೆ, ಗ್ರಾಮದ ಸಾಹುಕಾರ್‌ ಶೈಲೇಂದ್ರ.

” ವೆಂಕಟೇಶಮೂರ್ತಿ ಓದಿನಲ್ಲಿ ಬಹಳ ಚುರುಕು. ಈಶ್ವರಚಂದ್ರ ವಿದ್ಯಾಸಾಗರ್‌ ಎಂಬ ಗೆಳೆಯನೊಂದಿಗೆ ಆಗಲೇ ಕವಿತೆ ಬರೆಯುತ್ತಿದ್ದರು. ಅಷ್ಟಾಗಿ ಆಟ ಆಡುತ್ತಿರಲಿಲ್ಲ. ಯಾವಾಗಲೂ ಕತೆ-ಕವಿತೆಯಲ್ಲೇ ಹೆಚ್ಚು ಆಸಕ್ತಿ. ಈಗ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಇಡೀ ಗ್ರಾಮಕ್ಕೇ ಹೆಮ್ಮೆಯ ವಿಚಾರ’.
– ಜಿ. ಶಿವಪ್ಪ, ನಿವೃತ್ತ ಮುಖ್ಯ ಶಿಕ್ಷಕ

Advertisement

– ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next