Advertisement
ಶ್ರೀ ವಿಜಯ ವೇದಿಕೆ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಕನ್ನಡ ಸಮಾಜದ ವಿವಿಧ ವಲಯಗಳ ಪ್ರಮುಖರು ನಡೆಸಿದ ಸಂವಾದ ಅತ್ಯಂತ ಚುಟುಕಾಗಿ ಮುಗಿದುಹೋಯಿತು. ಸಮಯಾಭಾವ ಇದ್ದಿದ್ದರಿಂದಲೋ ಏನೋ, ಅಧ್ಯಕ್ಷರು ತಮ್ಮ ಉತ್ತರಗಳನ್ನು ಬಹಳ ಕ್ಲುಪ್ತಗೊಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರ ನೀಡುವಾಗ ಅದನ್ನು ತಿಳಿಸಿದರೂ ಕೂಡ. ಕೆಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದರೂ, ನಿಖರವಾಗಿ ಉತ್ತರಿಸಲಿಲ್ಲ. ತಮ್ಮ ಕವನಗಳಂತೆಯೇ ಇಲ್ಲೂ ಉತ್ತರದ ಧ್ವನಿಯನ್ನು ಗ್ರಹಿಸಿಕೊಳ್ಳಬೇಕಾದ ಹೊಣೆಯನ್ನು ಜನರಿಗೇ ನೀಡಿದರು. ಅವರ ಉದ್ಘಾಟನಾ ಭಾಷಣದಲ್ಲಿ ಭಾರತದ ಸೇತು ಭಾಷೆಯನ್ನಾಗಿ ಸಂಸ್ಕೃತವನ್ನು ಬಳಸಬಹುದು ಎಂಬ ಸಲಹೆ ಬಗ್ಗೆ, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಸಮಕಾಲೀನ ಸಮಸ್ಯೆಗಳ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದವು.
– ಕವಿ ಕಲಿಯೂ ಆಗಬಲ್ಲ. ಆದರೆ ನಿಜ ಕವಿಯ ಜವಾಬ್ದಾರಿ ಅವನ ಬರವಣಿಗೆಯ ಮೇಲಿನ
ಬದ್ಧತೆಯಲ್ಲಿರಬೇಕು. ಕಲಿಯಾಗಬಹುದಾದರೂ ಆಗಲೇಬೇಕೆಂದಿಲ್ಲ.
Related Articles
– ಸೂಕ್ಷ್ಮ ಸಂವೇದನೆಯ ಕವಿಗಳ ಮೇಲೆ ಮಹಾತ್ಮರ ಪ್ರಭಾವವಾಗಿಯೇ ಆಗುತ್ತದೆ. ನನಗೂ ಗಾಂಧೀಜಿ, ಅಂಬೇಡ್ಕರ್, ಪರಮಹಂಸ, ರಮಣರಂತಹವರ ಪ್ರಭಾವವಾಗಿದೆ. ನನ್ನ ಆಪ್ತಗೀತೆಯ ಕೆಲವು ಸಾಲು ಅಂಬೇಡ್ಕರ್ ಚಿಂತನೆಯ ಫಲ.
Advertisement
ನೀವು ನಾಟಕಗಳಿಗೆ ಕಡಿಮೆ ಆದ್ಯತೆ ನೀಡಿದ್ದೀರಿ ಅನ್ನಿಸ್ತಾ ಇದೆಯಲ್ಲ…– ನನಗೆ ಎಲ್ಲ ಕಲಾಪ್ರಕಾರವೂ ಪ್ರಮುಖ. ವಿಮರ್ಶಕರು ಮಾತ್ರ ನನ್ನ ನಾಟಕ ಸಾಹಿತ್ಯಕ್ಕಿಂತ, ಕಾವ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿದರು. ನನ್ನ ನಾಟಕಗಳು ಸಂಖ್ಯೆಯಲ್ಲಿ ಕಡಿಮೆ, ಪ್ರಭಾವ ಜಾಸ್ತಿಯೇ ಇದೆ. ಕನ್ನಡ ಕನ್ನಡ ಅನ್ನುವ ಶ್ರೀಮಂತರ ಮಕ್ಕಳು ಇಂಗ್ಲಿಷ್‌ನಲ್ಲಿ ಕಲಿಯುತ್ತಿದ್ದಾರೆ. ಹಾಗಾದರೆ ಬಡವರಿಗೆ ಮಾತ್ರ ಕನ್ನಡವೇ?
– ಇದರಲ್ಲಿ ಯಾವ ತಾರತಮ್ಯವೂ ಇಲ್ಲ. ಎಲ್ಲರ ಮಕ್ಕಳೂ ಕನ್ನಡದಲ್ಲಿ ಕಲಿಯುವಂತಹ ವಾತಾವರಣ ಬರಲಿ ಎಂದು ನಾನು ಬಯಸುತ್ತೇನೆ. ಪಂಪನಂತಹ ಹಳೆಗನ್ನಡ ಸಾಹಿತಿಗಳ ಸಾಹಿತ್ಯವನ್ನು ಸರಳೀಕರಿಸಿ ಹೊಸಗನ್ನಡಕ್ಕೆ ಅನುವಾದಿಸಿದ್ದೀರಿ, ಇದರಿಂದ ಮೂಲ ಸಾಹಿತ್ಯ ಸರಳೀಕರಿಸಿದಂತಾಗುತ್ತದೆ ಎಂಬ ಆರೋಪ ಹುಟ್ಟಿಕೊಂಡಿದೆ…
– ಇದು ಲೋಕಸಹಜ ಕ್ರಮ. ಹಳೆಯ ಇಂಗ್ಲಿಷ್ ಕೃತಿಗಳನ್ನು ಹೊಸ ಇಂಗ್ಲಿಷ್‌ಗೆ ಅನುವಾದಿಸುತ್ತಿದ್ದಾರೆ. ನಾನು ಪಂಪನ ಕಾವ್ಯವನ್ನು ತಿದ್ದುತ್ತಿಲ್ಲ. ಅದನ್ನು ಸರಳೀಕರಿಸಿ ರುಚಿ ಹುಟ್ಟಿಸುತ್ತಿದ್ದೇನೆ ಅಷ್ಟೇ. ದ್ವಿಭಾಷಾ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿ ಬೇಡ, ಸಂಸ್ಕೃತ ಅಥವಾ ಪ್ರಾಕೃತ ಇರಲಿ ಎಂದಿದ್ದೀರಿ. ಜನರಿಂದ ಬಹಳ ದೂರವಾಗಿರುವ ಅದನ್ನು ಜನರ ಬಳಿಗೆ ಹೇಗೆ ಒಯ್ಯುತ್ತೀರಿ?
– ಸಂಸ್ಕೃತ ಅಥವಾ ಪ್ರಾಕೃತವನ್ನು ಕಲಿಸುವುದು ಬಹಳ ವರ್ಷಗಳ ಯೋಜನೆಯಲ್ಲಿ ಮೂಡಿ ಬರಲಿ
ಎಂದಿದ್ದೇನೆ. ಆ ಸಲಹೆ ದ್ವಿಭಾಷಾ ಸೂತ್ರಕ್ಕೆ ಸಂಬಂಧಿಸಿದ್ದಲ್ಲ. ಹಿಂದಿಯ ಬದಲು ನೀವು ಸಂಸ್ಕೃತವನ್ನು ಸೇತುಬಂಧ ರೀತಿ ಬಳಸಿ ಎಂದಿದ್ದೀರಿ. ಅದರ ಮರ್ಮ ಏನು?
– ಇದರಲ್ಲಿ ಮರ್ಮ ಏನೂ ಇಲ್ಲ. ಅದು ನನ್ನ ಸಲಹೆ ಮಾತ್ರ. ಬೇಕಾದರೆ ಬೇರೆ ಭಾಷೆಯನ್ನೂ ಬಳಸಬಹುದು! ಅತ್ಯಂತ ಹಗುರವಾಗಿ ಚರ್ಚೆ ನಡೆಯುವ ಈಗಿನ ಕಾಲದಲ್ಲಿ ಆ ಕಾಲದ ಪ್ರಮುಖ ಸಾಹಿತ್ಯಗಳಾದ ಭಗವದ್ಗೀತೆಯಂತಹ ಕೃತಿಗಳು ನಿಮಗೆ ಆಪ್ತವಾಗಿದ್ದು ಹೇಗೆ?
– ಭಗವದ್ಗೀತೆಯನ್ನು ನಾನು ಆಪ್ತಗೀತೆ ಮಾಡಿಕೊಂಡಿದ್ದೇನೆ. ಅಲ್ಲಿನ ಜ್ಞಾನಯೋಗವನ್ನಾಗಲೀ, ಭಕ್ತಿಯೋಗವನ್ನಾಗಲೀ ನಾನು ಸ್ವೀಕರಿಸಿಲ್ಲ. ಅಲ್ಲಿನ ಕರ್ಮಯೋಗ ನನಗೆ ಇಷ್ಟ. ಶ್ರೀಕೃಷ್ಣ ಹೇಳುವ ಕರ್ಮಯೋಗವೂ, ಬಸವಣ್ಣನವರ ಕಾಯಕಯೋಗ ಒಂದೇ. ಕೃಷ್ಣನ ಕರ್ಮಯೋಗ ಭಾರತಕ್ಕೆ
ಮಹತ್ವವಾದದ್ದು. ಈಗ ಸಿಎಎಯಂತಹ ಕಾಯ್ದೆ ಜಾರಿಯಾಗಿದೆ, ಆಧಾರ್‌ನ್ನು ಕಡ್ಡಾಯಗೊಳಿಸಲಾಗಿದೆ. ನಿಮ್ಮ ಅಭಿಪ್ರಾಯ?
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ಕಾಯ್ದೆಗಳ ಬಗ್ಗೆ ಅರಿವು ಮೂಡಬೇಕಾಗಿದೆ. ಭಾರತವನ್ನು ಒಡೆಯದೆ, ಅಖಂಡವಾಗಿ ಉಳಿಸಿಕೊಳ್ಳಬೇಕು. ಎಲ್ಲರನ್ನೂ ಒಳಗೊಂಡು ನಡೆಸಿಕೊಂಡು ಹೋಗಬೇಕು. ಇದು ನನ್ನ ಸ್ಪಷ್ಟ ಅಭಿಪ್ರಾಯ. ಸೀತೆ -ದ್ರೌಪದಿಯರಲ್ಲಿ ಇವತ್ತು ಯಾರು ಭಾರತದ ಸ್ತ್ರೀಶಕ್ತಿಯಾಗಬಹುದು?
ಇದು ಸೂಕ್ಷ್ಮಪ್ರಶ್ನೆ. ಈಗ ಪ್ರತಿ ಮನೆ ಯಲ್ಲಿ ಇಬ್ಬರೂ ಇದ್ದಾರೆ. ನೊಂದುಕೊಳ್ಳುವ ಸೀತೆಯರಿದ್ದಾರೆ. ಸಿಡಿದೇಳುವ ದ್ರೌಪದಿಯರಿದ್ದಾರೆ. ವಾಲ್ಮೀಕಿ ರೂಪಿಸಿದ ಸೀತೆ ಮೊದಲ ಹಂತ, ವ್ಯಾಸ ರೂಪಿಸಿದ ದ್ರೌಪದಿ ಕೊನೆಯಹಂತ. ನನ್ನ ಕಾವ್ಯಗಳಲ್ಲಿ ದ್ರೌಪದಿ ಪಕ್ಷಪಾತಿತನ ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೆ. ಪೃಥ್ವಿರಾಜ್