ಬೀದರ: ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 85,234 ಜನರು ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳನ್ನು ಜಿಲ್ಲೆ ಸೇರಿದಂತೆ ನೆರೆ ರಾಜ್ಯಗಳಾದ ತೆಲಂಗಾಣ ಹಾಗೂ ಮಹಾರಾಷ್ಟ್ರದ ಒಟ್ಟಾರೆ 36 ಖಾಸಗಿ ಆಸ್ಪತ್ರೆಗಳಿಗೆ ಈ ಯೋಜನೆ ಅಡಿಯಲ್ಲಿ ಚಿಕಿತ್ಸೆಗಾಗಿ ಕಳುಹಿಸಲಾಗುತ್ತಿದೆ. ಆದರೆ, ಯಶಸ್ವಿನಿ ಯೋಜನೆಯಂತೆ ಈ ಯೋಜನೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಫಲಾನುಭವಿಗಳ ಆರೋಪ.
ಯಶಸ್ವಿನಿ ಯೋಜನೆ ಅಡಿಯಲ್ಲಿ ಫಲಾನುಭವಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಅವಕಾಶ ಇತ್ತು. ಆದರೆ, ಇದೀಗ ಸರ್ಕಾರ ಜಾರಿ ಮಾಡಿದ ಹೊಸ ಯೋಜನೆಯಿಂದ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.
ತುರ್ತು ಸಂದರ್ಭದಲ್ಲಿ (ಮಾರಣಾಂತಿಕ) ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ನೇರವಾಗಿ ರೋಗಿಯನ್ನು ದಾಖಲು ಮಾಡಲು ಅವಕಾಶವಿದೆ. ಆದರೆ, ಯಶಸ್ವಿನಿ ಯೋಜನೆ ಅಡಿಯಲ್ಲಿ ಈ ಹಿಂದೆ, ಕಣ್ಣಿನ ಶಸ್ತ್ರ ಚಿಕಿತ್ಸೆ, ಹೆರಿಗೆ, ಹೆರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ರೋಗಗಳಿಗೆ ನೇರವಾಗಿ ಚಿಕಿತ್ಸೆ ಪಡೆಯುವ ಅವಕಾಶವಿತ್ತು. ಈ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಗಳು ಇಂದಿಗೂ ಕೂಡ ಯಶಸ್ವಿನಿ ಯೋಜನೆ ನೆನಪಿಸಿಕೊಳ್ಳುತ್ತಿದ್ದಾರೆ.
ಚಿಕಿತ್ಸೆ ವಿವರ: ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ 37,337 ಜನರು ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದಿದ್ದು, 523 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಭಾಲ್ಕಿ ತಾಲೂಕು ಆಸ್ಪತ್ರೆಯಲ್ಲಿ 16,967 ರೋಗಗಳ ಪೈಕಿ 109 ಜನರಿಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅದೇ ರೀತಿ ಬಸವಕಲ್ಯಾಣ ತಾಲೂಕಿನಲ್ಲಿ 6,210 ಜನರ ಪೈಕಿ 162, ಹುಮನಾಬಾದ 15,825 ಜನರ ಪೈಕಿ 1,160 ರೋಗಿಗಳು, ಔರಾದ ತಾಲೂಕಿನಲ್ಲಿ 8,886 ಜನರ ಪೈಕಿ 87 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.
ವಿಲೀನ: ಕೇಂದ್ರ ಸರ್ಕಾರದ ಆಯುಷ್ಮಾನ ಭಾರತ್ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನಗೊಂಡಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಉಸ್ತುವಾರಿ ವಹಿಸಿಕೊಂಡಿದೆ. ಬಿಪಿಎಲ್, ಎಪಿಎಲ್ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ, ಸಾರ್ವಜನಿಕರು ಇಂದಿಗೂ ಕೂಡ ಯಶಸ್ವಿನಿ ಯೋಜನೆ ಮಾದರಿಯಲ್ಲಿ ಸರ್ಕಾರ ಯೋಜನೆ ರೂಪಿಸಿ ಪರಿಣಾಮಕಾರಿ ಚಿಕಿತ್ಸೆಗೆ ಮುಂದಾಗಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.
ಕಾರ್ಡ್ ಕೇಂದ್ರಗಳು: ಸದ್ಯ ಜಿಲ್ಲೆಯಲ್ಲಿ ಒಟ್ಟು 16 ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ಇಲ್ಲಿನ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೀದರ್ ಜಿಲ್ಲಾಸ್ಪತ್ರೆಯಲ್ಲಿ 2 ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ 4 ಕೇಂದ್ರ ಹಾಗೂ 8 ಸಮುದಾಯ ಕೇಂದ್ರಗಳಲ್ಲಿ ಕಾರ್ಡ್ ವಿತರಣೆಗೆ ಅಧಿಕಾರಿಗಳು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ.
ಯಶಸ್ವಿನಿ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳ ಮಧ್ಯೆ ಸ್ವಲ್ಪ ಬದಲಾವಣೆಗಳು ಇವೆ. ಮಾರಣಾಂತಿಕ ಪ್ರಕರಣಗಳ ಸಂದರ್ಭದಲ್ಲಿ ಮಾತ್ರ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಇದೀಗ ಆಯುಷ್ಮಾನ್ ಭಾರತ್ ಹಾಗೂ ಕರ್ನಾಟಕ ಆರೋಗ್ಯ ಯೋಜನೆ ವಿಲೀನಗೊಂಡಿದ್ದು, ಜಿಲ್ಲೆಯ ಜನರಿಗೆ ಯೋಜನೆಯ ಲಾಭ ನಿಡುವ ನಿಟ್ಟಿನಲ್ಲಿ ಒಟುx 16 ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದೇ ತಿಂಗಳ ಕೊನೆ ವರೆಗೆ ಪೂರಕ ಗಣಕಯಂತ್ರ ಸೇರಿದಂತೆ ವಿವಿಧ ವಸ್ತುಗಳು
ಬರಲಿದ್ದು, ಸಾರ್ವಜನಿಕರಿಗೆ ಕಾರ್ಡ್ ವಿತರಣೆ ಶುರು ಮಾಡುತ್ತೇವೆ.
ಡಾ| ನಂದಕುಮಾರ ಸುವರ್ಣ, ಆರೋಗ್ಯ ಸುರಕ್ಷಾ ಅಧಿಕಾರಿ
ದುರ್ಯೋಧನ ಹೂಗಾರ