Advertisement

65 ಅಡಿ ಆಳದ ಬಾವಿಗೆ ಬಿದ್ದು ಬದುಕುಳಿದ 85 ವರ್ಷದ ಅಜ್ಜಿ

12:29 AM May 25, 2019 | Team Udayavani |

ವಿಜಯಪುರ: ಜಿಲ್ಲೆಯಲ್ಲಿ 85ರ ವೃದ್ಧೆಯೊಬ್ಬರು ಆಕಸ್ಮಿಕವಾಗಿ 65 ಅಡಿ ಆಳದ 15 ಅಡಿ ನೀರಿದ್ದ ಬಾವಿಗೆ ಬಿದ್ದರೂ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಜರುಗಿದೆ.

Advertisement

ಗ್ರಾಮದ ಗದ್ಯಾಳ ತೋಟದ ವಸ್ತಿಯಲ್ಲಿ ಮನೆಯ ಮುಂದಿದ್ದ ಬಾವಿಯ ಬಳಿ ಹೋಗಿದ್ದಾಗ ತಂಗೆವ್ವ ಗದ್ಯಾಳ ಎಂಬ 85ರ ವೃದ್ಧೆ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದ್ದಾಳೆ. 65 ಅಡಿ ಆಳವಿದ್ದ ಈ ಬಾವಿ ಭೀಕರ ಬರದಿಂದ ಬತ್ತಿದ್ದು, ಟ್ಯಾಂಕರ್‌ ಮೂಲಕ 15 ಅಡಿ ನೀರು ತುಂಬಿಸಲಾಗಿತ್ತು.

ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದ್ದ ಅಜ್ಜಿ ಸುಮಾರು ಒಂದು ಗಂಟೆ ಕಾಲ ಪಂಪ್‌ಸೆಟ್‌ಗೆ ಅಳವಡಿಸಿದ್ದ ಪೈಪ್‌ ಹಿಡಿದುಕೊಂಡು ನಿಂತಿದ್ದಾಳೆ. ರಕ್ಷಣೆಗೆ ಅಜ್ಜಿ ಕೂಗಿಕೊಂಡರೂ ಅಳದಲ್ಲಿದ್ದ ಬಾವಿಯಿಂದ ಅಜ್ಜಿಯ ಕೀರು ಧ್ವನಿ ಯಾರಿಗೂ ಕೇಳಿಸಿಲ್ಲ. ಈ ಹಂತದಲ್ಲಿ ಅಜ್ಜಿ ಕಾಣೆಯಾಗಿದ್ದರಿಂದ ಮನೆಯವರು ಸುತ್ತಮುತ್ತಲಿನ ತೋಟದ ವಸ್ತಿಗಳಲ್ಲೆಲ್ಲ ಹುಡುಕಾಡಿ ಮನೆಗೆ ಬಂದು, ಬಾವಿಯಲ್ಲಿ ಇಣುಕಿದಾದ ಅಜ್ಜಿ ರಕ್ಷಣೆಗೆ ಮೊರೆ ಇಡುತ್ತಿರುವುದು ಕಂಡಿತು.

ಕೂಡಲೇ ಮನೆಯವರು ಹೊರಸಿನ ನಾಲ್ಕು ಕಾಲಿಗೆ ಹಗ್ಗ ಕಟ್ಟಿ ಬಾವಿಯೊಳಗೆ ಬಿಟ್ಟು, ಅಜ್ಜಿಯನ್ನು ರಕ್ಷಿಸಿದ್ದಾರೆ. ರಕ್ಷಣೆ ಬಳಿಕ ಕೂಡಲೇ ಅಜ್ಜಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದು, ಅಜ್ಜಿ ಸುರಕ್ಷಿತವಾಗಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next