ನವದೆಹಲಿ: ಕೋವಿಡ್ ಗೆ ಬಲಿಯಾದವರಲ್ಲಿ ಶೇ. 85% ಜನರು 45 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಆರೋಗ್ಯ ಸಚಿವಾಲಯ ವರದಿ ನೀಡಿದೆ. ಆದರೇ ಇವರಲ್ಲಿ ಅನೇಕರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರ ಜನಸಂಖ್ಯೆ ಶೇ.25ರಷ್ಟಿದೆ. ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಶೇ.10 ರಷ್ಟಿದ್ದಾರೆ.
ದೇಶದ ಜನಸಂಖ್ಯೆಯ 25 ಪ್ರತಿಶತದಷ್ಟು ಜನರು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಮತ್ತು ಅನೇಕರು ವಿವಿಧ ಸಮಸ್ಯೆಗಳಿಂದ ಬಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಅಪಾಯದ ಜನಸಂಖ್ಯೆಯ ಗುಂಪಿನ ಕಡೆಗೆ ವಿಶೇಷ ಗಮನ ಹರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕರ್ತವ್ಯ ಅಧಿಕಾರಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
60 ರಿಂದ 74 ವರ್ಷದೊಳಗಿನ ಜನರು ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 8% ರಷ್ಟಿದ್ದಾರೆ. ಈ ವಯಸ್ಸಿನವರಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇಕಡಾ 39 ರಷ್ಟಿದೆ. 75 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರು ಭಾರತದ ಜನಸಂಖ್ಯೆಯ ಶೇಕಡಾ 2 ರಷ್ಟಿದ್ದಾರೆ. ವೈರಸ್ ಗೆ ಈ ವಯಸ್ಸಿನವರ ಸಾವಿನ ಪ್ರಮಾಣ ಶೇ. 14% ರಷ್ಟಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಭಾರತದ ಜನಸಂಖ್ಯೆಯ ಶೇಕಡಾ 35 ರಷ್ಟಿದ್ದು, ಇವರಲ್ಲಿ ವೈರಾಣುವಿಗೆ ಶೇ 1 ರಷ್ಟು ಮಾತ್ರ ಸಾವಿನ ಪ್ರಮಾಣವಿದೆ ಎಂದು ವರದಿ ತಿಳಿಸಿದೆ.
15-29 ವರ್ಷದೊಳಗಿನವರು ಭಾರತದಲ್ಲಿ ಸುಮಾರು 18 ರಷ್ಟು ಇದ್ದು, ಇವರಲ್ಲಿ ಸಾವಿನ ಪ್ರಮಾಣ ಶೇ 3ರಷ್ಟಿದೆ. 30-44 ವಯಸ್ಸಿನವರು ಶೇ 22% ಇದ್ದು, ಇವರಲ್ಲಿ 11% ಮಂದಿ ಮಾತ್ರ ಸಾವುನೋವುಗಳಿಗೆ ಸಾಕ್ಷಿಯಾಗಿದ್ದಾರೆ.